ದೇವನಹಳ್ಳಿ (ಬೆಂಗಳೂರು): ವಿಮಾನದ ವಾಶ್ ರೂಮ್ನಲ್ಲಿ ಅಡಗಿಸಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಒಂದು ಕೆಜಿ ಅಧಿಕ ತೂಕದ 80 ಲಕ್ಷ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಅಕ್ಟೋಬರ್ 24ರಂದು ಅಬುಧಾಬಿಯಿಂದ ಬಂದ ಇವೈ 238 ವಿಮಾನವನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ ವಿಮಾನದ ವಾಶ್ ರೂಮ್ನಲ್ಲಿ ಕಪ್ಪು ಬಣ್ಣದ ಚೀಲದಲ್ಲಿ ಚಿನ್ನವನ್ನು ಅಡಗಿಸಿ ಇಟ್ಟಿರುವುದು ಪತ್ತೆಯಾಗಿದೆ. ಒಟ್ಟು 1331.66 ಗ್ರಾಂ ತೂಕದ 80,21,920 ರೂಪಾಯಿ ಮೌಲ್ಯದ ಚಿನ್ನವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ :ಫೇಸ್ಕ್ರೀಮ್, ಚಪ್ಪಲಿಗಳಲ್ಲಿ ಚಿನ್ನ ಸಾಗಾಟ; ವ್ಯಕ್ತಿಯಿಂದ 495 ಗ್ರಾಂ ಚಿನ್ನ ಜಪ್ತಿ
ಪ್ರತ್ಯೇಕ ಪ್ರಕರಣ :ಕಳೆದ ಅಕ್ಟೋಬರ್ 20 ಮತ್ತು 21ರ ನಡುವೆ ಕಾರ್ಯಾಚರಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು ಚಿನ್ನ ಸಾಗಿಸುತ್ತಿದ್ದ ಮೂವರನ್ನು ಬಂಧಿಸಿದ್ದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡಲು ಯತ್ನಿಸಿದ್ದ ಮೂವರನ್ನು ಬಂಧಿಸಲಾಗಿತ್ತು. ಬಂಧಿತರಿಂದ 67 ಲಕ್ಷ ಮೌಲ್ಯದ ಒಂದು ಕೆ.ಜಿಗೂ ಅಧಿಕ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದುಕೊಂಡಿದ್ದರು.
ರವಿಕೆಯಲ್ಲಿ ಚಿನ್ನ ಸಾಗಿಸುತ್ತಿದ್ದ ಮಹಿಳೆ : ವಿಮಾನ ಸಂಖ್ಯೆ ಎಕೆ- 053ಯಲ್ಲಿ ಕೌಲಾಲಂಪುರದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಮಹಿಳೆಯನ್ನು ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ಭಾರತೀಯ ಮೂಲದ ಮಹಿಳೆ ತಾನು ಧರಿಸಿದ್ದ ರವಿಕೆಯೊಳಗೆ ಪೇಸ್ಟ್ ರೂಪದಲ್ಲಿ ಚಿನ್ನ ಸಾಗಿಸಲು ಯತ್ನಿಸಿದ್ದರು. ಈ ವೇಳೆ, ತಪಾಸಣೆ ನಡೆಸಿದ ಅಧಿಕಾರಿಗಳು ಆಕೆಯನ್ನು ಬಂಧಿಸಿದ್ದರು. ಈಕೆಯಿಂದ 17.9 ಲಕ್ಷ ರೂಪಾಯಿ ಮೌಲ್ಯದ 300.95 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿತ್ತು.
ಗುದನಾಳದಲ್ಲಿರಿಸಿ ಚಿನ್ನ ಸಾಗಾಟ :ವಿಮಾನ ಸಂಖ್ಯೆ ಎಕೆ-053ಯಲ್ಲಿ ಕೌಲಾಲಂಪುರದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಮಹಿಳೆಯನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ವೇಳೆ, ಮಹಿಳೆಯು ತನ್ನ ಗುದನಾಳದಲ್ಲಿ ಅಡಗಿಸಿಟ್ಟು ಪೇಸ್ಟ್ ರೂಪದಲ್ಲಿ ಚಿನ್ನ ಸಾಗಿಸುತ್ತಿದ್ದುದು ಕಂಡುಬಂದಿತ್ತು. ಬಳಿಕ ಆಕೆಯನ್ನು ವಶಕ್ಕೆ ಪಡೆದ ಅಧಿಕಾರಿಗಳು, 34.4 ಲಕ್ಷ ರೂಪಾಯಿ ಮೌಲ್ಯದ 578.27 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದರು.
ಡ್ರೈ ಫ್ರೂಟ್ಸ್ ಪ್ಯಾಕೆಟ್ನಲ್ಲಿ ಚಿನ್ನ:ಗಲ್ಫ್ ಏರ್ ಫ್ಲೈಟ್ GF 282 ಮೂಲಕ ಕುವೈಟ್‌ನಿಂದ ಬಂದ ಭಾರತೀಯ ಮೂಲದ ಪ್ರಯಾಣಿಕರನ್ನು ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ವೇಳೆ ಡ್ರೈ ಫ್ರೂಟ್ಸ್ ಪ್ಯಾಕೇಟ್ ಚಿನ್ನದ ತುಂಡುಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿತ್ತು. ಪ್ರಯಾಣಿಕನಿಂದ 40 ಚಿನ್ನದ ತುಂಡುಗಳು ವಶಕ್ಕೆ ಪಡೆದಿದ್ದು, 254 ಗ್ರಾಂದ ತೂಕದ 15,26,565 ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.