ಬೆಂಗಳೂರು:ಲಾಲ್‌ಬಾಗ್ 'ಫಲಪುಷ್ಪ ಪ್ರದರ್ಶನ'ವನ್ನು ಭಾನುವಾರ ಬರೋಬ್ಬರಿ 1.25 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು, 80.5 ಲಕ್ಷ ಪ್ರವೇಶ ಶುಲ್ಕ ಸಂಗ್ರಹವಾಗಿದೆ. ಹೀಗಾಗಿ ವಾರಾಂತ್ಯದ ಹಿನ್ನೆಲೆಯಲ್ಲಿ ಸಾಗರೋಪಾದಿಯಲ್ಲಿ ಆಗಮಿಸಿದ್ದ ಸಾರ್ವಜನಿಕರು ಹೂವುಗಳ ಜಾತ್ರೆಯನ್ನು ಕಣ್ತುಂಬಿಕೊಂಡರು.
ಸ್ವಾತಂತ್ರ್ಯ ದಿನದ ನಿಮಿತ್ತ ನಡೆಯುತ್ತಿರುವ 214ನೇ ಹೂವುಗಳ ಹಬ್ಬದ ಹತ್ತನೇ ದಿನ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆಯಿಂದ ಸಂಜೆವರೆಗೆ ಲಾಲ್‌ಬಾಗ್‌ನಲ್ಲಿ ಜನಜಾತ್ರೆಯೇ ನೆರೆದಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 7ರವರೆಗೆ ಲಾಲ್‌ಬಾಗ್ ಜನಜಂಗುಳಿಯಿಂದ ಕೂಡಿತ್ತು. ಈ ವರ್ಷದ ಪುಷ್ಪ ಪ್ರದರ್ಶನಕ್ಕೆ ದಿನವೊಂದಕ್ಕೆ ಭೇಟಿ ನೀಡಿದ ಗರಿಷ್ಠ ಸಂಖ್ಯೆ ಇದಾಗಿದೆ. ಇನ್ನು ವಾರಾಂತ್ಯದ ಹಿನ್ನೆಲೆಯಲ್ಲಿ ಹೆಚ್ಚಿನ ಜನ ಬರುವ ಸಾಧ್ಯತೆ ಇದ್ದ ಕಾರಣದಿಂದ 700ಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿತ್ತು.
ಸ್ವಾತಂತ್ರ್ಯ ದಿನಾಚರಣೆ ಎಂದು ಮೆಟ್ರೋ ರೈಲಿನ ದರದಲ್ಲಿ ಇಳಿಕೆ: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಕಡಿಮೆ ದರದಲ್ಲಿ ಲಾಲ್ಬಾಗ್ಗೆ ತೆರಳಲು ಅವಕಾಶ ನೀಡಿರುವ ಕಾರಣದಿಂದ ಅಂದು ಹೆಚ್ಚಿನ ಪ್ರಮಾಣದಲ್ಲಿ ಜನತೆ ಬರುವ ಸಾಧ್ಯತೆಯಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.