ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರನ್ನು ಓಲೈಸಲು ರಾಜಕೀಯ ಪಕ್ಷಗಳು ವಾಮಮಾರ್ಗ ಬಳಸುತ್ತಿವೆ. ಇದಕ್ಕೆ ಕಡಿವಾಣ ಹಾಕಲು ನಗರದೆಲ್ಲೆಡೆ ಚೆಕ್ ಪೋಸ್ಟ್ ನಿರ್ಮಿಸಲಾಗಿದ್ದು ಇಂದು ಎಸ್ಜೆ ಪಾರ್ಕ್ ಪೊಲೀಸರು ಪರಿಶೀಲನೆ ನಡೆಸುವಾಗ ಕೆಟ್ಟು ನಿಂತ ಆಟೋದಲ್ಲಿ ದಾಖಲೆ ಇಲ್ಲದ ಒಂದು ಕೋಟಿ ರೂಪಾಯಿ ನಗದು ಪತ್ತೆಯಾಗಿದೆ.
500 ರೂಪಾಯಿ ಮುಖಬೆಲೆಯ 1 ಕೋಟಿ ರೂಪಾಯಿ ನಗದು ದೊರೆತಿದ್ದು, ಆಟೋದಲ್ಲಿ ಹಣ ಸಾಗಿಸುತ್ತಿದ್ದ ಪ್ರವೀಣ್ ಹಾಗೂ ಸುರೇಶ್ ಎಂಬುವರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರು ವ್ಯಕ್ತಿಗಳು ಆಟೋದಲ್ಲಿ ಎಸ್ಜೆ ಪಾರ್ಕ್ನ ಕಾಳಿಂಗರಾವ್ ಬಸ್ ನಿಲ್ದಾಣದ ಬಳಿ ಬರುವಾಗ ಆಟೋ ಕೆಟ್ಟು ನಿಂತಿದೆ. ಅದೇ ಸ್ಥಳದಲ್ಲಿ ಹಾಕಲಾಗಿದ್ದ ಚೆಕ್ ಪೋಸ್ಟ್ನಲ್ಲಿದ್ದ ಪೊಲೀಸ್ ಸಿಬ್ಬಂದಿ ಅನುಮಾನಗೊಂಡು ಪರಿಶೀಲಿಸಿದಾಗ ಕೋಟ್ಯಂತರ ರೂಪಾಯಿ ಹಣ ಸಿಕ್ಕಿದೆ.
ಯಾವುದೇ ದಾಖಲಾತಿಯಿಲ್ಲದೇ ಹಣ ಸಾಗಿಸುವುದನ್ನು ಗಮನಿಸಿ ಹಣ ಹಾಗೂ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಐಟಿ ಇಲಾಖೆಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಈ ಹಣ ರಾಜೇಶ್ ಎಂಟರ್ಪ್ರೈಸಸ್ಗೆ ಸೇರಿದ್ದು ಜಯನಗರದಿಂದ ವಿಜಯನಗರಕ್ಕೆ ಹಣ ಕೊಂಡ್ಯೊಯುತ್ತಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಇದರ ಸತ್ಯಾಸತ್ಯತೆ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.