ಬೆಂಗಳೂರು: ಡ್ರಗ್ ಮಾರಾಟದಿಂದ ಆರೋಪಿಯು ಸಂಪಾದಿಸಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಇದಕ್ಕೆ ಪೂರಕವೆಂಬಂತೆ ಸಕ್ಷಮ ಪ್ರಾಧಿಕಾರ ಸಹ ವಿಚಾರಣೆ ನಡೆಸಿ ಆರೋಪಿ ಗಳಿಸಿದ್ದ ಹಣವನ್ನು ಅಕ್ರಮ ಆಸ್ತಿ ಎಂದು ಆದೇಶಿಸಿದೆ. ಈ ಮೂಲಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯಡಿ (ಎನ್ಡಿಪಿಎಸ್) ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರಿಗೆ ಸಿಕ್ಕ ದೊಡ್ಡ ಜಯವಾಗಿದೆ.
ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಸುದ್ದಿಗೋಷ್ಠಿ ಡ್ರಗ್ಸ್ ದಂಧೆಯಲ್ಲಿ ತೊಡಗಿ ಸೂರ್ಯನಗರ ಪೊಲೀಸರಿಂದ ಬಂಧಿತನಾಗಿದ್ದ ಬಿಹಾರ ಮೂಲದ ಅಂಜಯ್ ಕುಮಾರ್ ಸಿಂಗ್ 2016ರಿಂದ ಆನೇಕಲ್ನ ಬ್ಯಾಗಡದೇನಹಳ್ಳಿಯಲ್ಲಿ ವಾಸವಾಗಿದ್ದ. ಈ ಹಿಂದೆ ಡ್ರಗ್ಸ್ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಬಿಹಾರದಲ್ಲಿ ಈತನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು.
2019ರಲ್ಲಿ 822 ಕೆ.ಜಿ. ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಸೂರ್ಯನಗರ ಪೊಲೀಸರು ಅಂಜಯ್ನನ್ನು ಬಂಧಿಸಿದ್ದರು. ಆದರೆ, ನಂತರ ಜಾಮೀನಿನ ಮೇಲೆ ಈತ ಹೊರಬಂದಿದ್ದ. ಈ ಸಂಬಂಧ ದೋಷಾರೋಪಣಾ ಪಟ್ಟಿಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಈತನ ಮೇಲೆ ನಿಗಾ ಇಟ್ಟಿದ್ದ ಪೊಲೀಸರು, ಮಾದಕವಸ್ತು ಮಾರಾಟ ಮಾಡಿ ಮಾಡಿರುವ ಆಸ್ತಿಗಳ ಮಾಹಿತಿ ಕಲೆ ಹಾಕಿದ್ದರು.
ಇದು ವ್ಯವಸ್ಥೆಗೆ ಹಿಡಿದ ಕನ್ನಡಿ
ಪತ್ನಿ ಶೀಲಾದೇವಿಯ ಹೆಸರಿನಲ್ಲಿ ಆನೇಕಲ್ ಬ್ಯಾಗಡದೇನಹಳ್ಳಿಯಲ್ಲಿ ಎರಡು 60-40 ಸೈಟ್, ಒಂದು 30-40 ಸೈಟ್ ಖರೀದಿಸಿದ್ದ. ಅಲ್ಲದೆ ಸತ್ಕೀರ್ತಿ ಹೆಸರಿನ ಅಪಾರ್ಟ್ಮೆಂಟ್ನಲ್ಲಿ ಒಂದು ಫ್ಲ್ಯಾಟ್ ಖರೀದಿಸಿದ್ದ. ಜೊತೆಗೆ ಒಂದು ಸ್ಕಾಪಿರ್ಯೋ ಕಾರು ಹಾಗೂ ಬ್ಯಾಂಕ್ ಖಾತೆಯಲ್ಲಿದ್ದ 9 ಲಕ್ಷ ಹಣ ಸೇರಿದಂತೆ ಒಟ್ಟು 1.68 ಕೋಟಿ ಮೌಲ್ಯದ ಆಸ್ತಿ ಸಂಪಾದಿಸಿದ್ದ. ಇಷ್ಟೆಲ್ಲ ಹಣವನ್ನು ಗಾಂಜಾ ಮಾರಾಟ ಮಾಡಿಯೇ ಸಂಪಾದನೆ ಮಾಡಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಮೊಕದ್ದಮೆ ಪ್ರಶ್ನಿಸಿ ಸಕ್ಷಮ ಪ್ರಾಧಿಕಾರದ ಮೊರೆ
ಗಾಂಜಾ ಮಾರಾಟದಿಂದ ಆರೋಪಿ ಗಳಿಸಿಕೊಂಡ ಕೋಟ್ಯಂತರ ರೂಪಾಯಿ ಆಸ್ತಿಯನ್ನು ಅಕ್ರಮ ಆಸ್ತಿ ಎಂದು ಚೆನ್ನೈನ ವಿಶೇಷ ಸಕ್ಷಮ ಪ್ರಾಧಿಕಾರ ಘೋಷಿಸಿದೆ. ಎನ್ಡಿಪಿಎಸ್ ಕಾಯ್ದೆ-1985 ಅಡಿ ಹಣಕಾಸು ವ್ಯವಹಾರ ತನಿಖೆಯಲ್ಲಿ ಅಕ್ರಮ ಆಸ್ತಿ ಎಂದು ಕಂಡು ಬಂದಿದ್ದರಿಂದ ಪ್ರಾಧಿಕಾರ ಈ ಆದೇಶ ಹೊರಡಿಸಿದೆ. ಇದಕ್ಕೂ ಮುನ್ನ ಆರೋಪಿಯು ತನ್ನ ಆಸ್ತಿ ಜಪ್ತಿ ಹಾಗೂ ತನ್ನ ಮೇಲೆ ಹಾಕಲಾಗಿರುವ ಮೊಕದ್ದಮೆ ಪ್ರಶ್ನಿಸಿ ಸಕ್ಷಮ ಪ್ರಾಧಿಕಾರದ ಮೊರೆ ಹೋಗಿದ್ದ.
ಆರೋಪ ಸಾಬೀತು, ಅಕ್ರಮ ಆಸ್ತಿ ಎಂದು ಆದೇಶ
ಈ ಬಗ್ಗೆ ವಿಚಾರಣೆ ನಡೆಸಿದ ಪ್ರಾಧಿಕಾರ ಆರೋಪಿಯ ಚರ ಮತ್ತು ಸ್ಥಿರ ಆಸ್ತಿಯು ಮಾದಕ ವಸ್ತು ಮಾರಾಟದಿಂದ ಗಳಿಸಿದ ಆಸ್ತಿ ಎಂದು ಸಾಬೀತಾಗಿ ಅಕ್ರಮ ಆಸ್ತಿ ಎಂದು ತೀರ್ಪು ನೀಡಿದೆ. ಇದರಂತೆ ಆರೋಪಿಯ ತನ್ನ ಅಕ್ರಮ ಆಸ್ತಿಯ ಮೇಲೆ ಯಾವುದೇ ವಹಿವಾಟು ನಡೆಸುವಂತಿಲ್ಲ. ವಿಲೇವಾರಿ, ಪರಭಾರೆ, ಭೋಗ್ಯ ಹಾಗೂ ಇನ್ನಿತರ ಯಾವುದೇ ಉದ್ದೇಶಕ್ಕೆ ಬಳಸಿಕೊಳ್ಳುವಂತಿಲ್ಲ ಎಂದು ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ತಿಳಿಸಿದ್ದಾರೆ.