ದೊಡ್ಡಬಳ್ಳಾಪುರ:ಸ್ನೇಹಿತರ ಜತೆ ಬಾವಿಯಲ್ಲಿ ಈಜಲು ಹೋಗಿದ್ದ ಯುವಕ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಬನವತಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಆರೂಢಿ ಗ್ರಾಮದ ನರಸಿಂಹರಾಜು (22) ಮೃತ ಯುವಕ. ವರ್ಷದ ಹಿಂದೆ ಆತನ ಸಹೋದರ ಅಪಘಾತದಲ್ಲಿ ಮೃತಪಟ್ಟಿದ್ದನಂತೆ. ವರ್ಷದೊಳಗೆ ಇಬ್ಬರು ಮಕ್ಕಳನ್ನ ಕಳೆದುಕೊಂಡ ಹೆತ್ತವರಿಗೆ ಬರಸಿಡಿಲು ಬಡಿದಂತಾಗಿದೆ.
ನಿನ್ನೆ(ಭಾನುವಾರ) ಮಧ್ಯಾಹ್ನ ನರಸಿಂಹರಾಜು ಸ್ನೇಹಿತರ ಜತೆಗೆ ಬಾವಿಯಲ್ಲಿ ಈಜಲು ಹೋಗಿದ್ದ. ಬಾವಿಗಿಳಿದ ನರಸಿಂಹರಾಜು ತುಂಬಾ ಸಮಯವಾದರೂ ನೀರಿನಿಂದ ಮೇಲೆ ಬಾರದ್ದನ್ನು ಕಂಡು ಜತೆಗಿದ್ದ ಸ್ನೇಹಿತರು ಹುಡುಕಾಡಿ ಬಳಿಕ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಸ್ಥಳೀಯ ಈಜುಗಾರರು ಮೃತದೇಹವನ್ನು ಹೊರತೆಗೆದಿದ್ದಾರೆ ಎಂದು ತಿಳಿದು ಬಂದಿದೆ.
ತಬ್ಬಲಿಯಾದ ಕುಟುಂಬ.. ಅರೂಢಿ ಗ್ರಾಮದ ನರಸಿಂಹಮೂರ್ತಿ ಹಾಗೂ ಮಂಜಮ್ಮ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದರು. ದಂಪತಿಯ ಎರಡನೇ ಮಗ ಕಾರ್ತಿಕ್ ಕಳೆದ ವರ್ಷ ಅಪಘಾತವೊಂದರಲ್ಲಿ ಮೃತಪಟ್ಟಿದ್ದ. ಈಗ ಮೊದಲ ಮಗ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ಕುಟುಂಬವನ್ನು ತಬ್ಬಲಿಯಾಗಿಸಿದೆ. ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬಾಲಕರಿಬ್ಬರು ನೀರುಪಾಲು: ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಈಜು ಬಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅನ್ನಪೂರ್ಣೇಶ್ವರಿ ಲೇಔಟ್‌ನಲ್ಲಿ ಇತ್ತೀಚೆಗೆ ನಡೆದಿತ್ತು. ಜರಗನಹಳ್ಳಿ ನಿವಾಸಿಗಳಾದ ಜಯಂತ್(13) ಮತ್ತು ಮೋಹನ್(13) ಮೃತಪಟ್ಟ ಬಾಲಕರು. ಕಳೆದ ಜ.30ರಂದು ಮಧ್ಯಾಹ್ನ 1.30ರ ಸುಮಾರಿಗೆ ಅನ್ನಪೂರ್ಣೇಶ್ವರಿ ಲೇಔಟ್‌ನ ಎಂಎನ್‌ಸಿ ಸ್ಪೋರ್ಟ್ಸ್ ಅಕಾಡೆಮಿಯ ಈಜುಕೊಳದಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಅಕಾಡೆಮಿಯ ಈಜು ತರಬೇತುದಾರ ಮೋಯಿನ್ ಎಂಬಾತನನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ:ಸ್ವಿಮ್ಮಿಂಗ್ ಫೂಲ್ನಲ್ಲಿ ಈಜಲು ತೆರಳಿ ಬಾಲಕರಿಬ್ಬರು ನೀರುಪಾಲು
ಮೂವರು ಪಿಯುಸಿ ವಿದ್ಯಾರ್ಥಿಗಳು ಸಾವು: ಈಜಲು ತೆರಳಿದ್ದ ಮೂವರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ನಂದನಹೊಸೂರು ಗ್ರಾಮದಲ್ಲಿ ಮಾ.28 ರಂದು ನಡೆದಿತ್ತು. ನಂದನಹೊಸೂರು ಗ್ರಾಮದ ಗಿರೀಶ್ (18), ಹೊರಕೆರೆದೇವರಪುರ ಗ್ರಾಮದ ಸಂಜಯ್ (18) ಹಾಗೂ ಕಣಿವೆ ಜೋಗಿಹಳ್ಳಿ ಗ್ರಾಮದ ಮನು(19) ಮೃತ ವಿದ್ಯಾರ್ಥಿಗಳೆಂದು ಗುರುತಿಸಲಾಗಿತ್ತು. ಮೃತ ವಿದ್ಯಾರ್ಥಿಯೊಬ್ಬನ ತಂದೆ ಎತ್ತುಗಳ ಮೈ ತೊಳೆಯಲೆಂದು ಕೆರೆಗೆ ಹೋಗಿದ್ದರು. ಈ ವೇಳೆ ಮೂವರು ಅವರನ್ನೇ ಹಿಂಬಾಲಿಸಿಕೊಂಡ ಹೋಗಿದ್ದರು. ಆದರೆ, ಕೆರೆಯಲ್ಲಿ ಈಜಾಡುತ್ತಿದ್ದಾಗ ಆಳದ ಜಾಗದಲ್ಲಿ ಸಿಲುಕಿ ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಸ್ಥಳೀಯರು ತಿಳಿಸಿದ್ದರು. ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಹೊಳಲ್ಕೆರೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ: ಚಿತ್ರದುರ್ಗ: ಪರೀಕ್ಷೆಯ ಮುನ್ನಾದಿನ ಮೂವರು ಪಿಯುಸಿ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು..