ಅನುಮಾನಾಸ್ಪದವಾಗಿ ಯುವಕ ಸಾವು ನೆಲಮಂಗಲ: ಕಳೆದ 4ವರ್ಷದ ಹಿಂದೆ ಹೆತ್ತವರಿಂದ ದೂರ ಉಳಿದು ತನ್ನ ಸ್ನೇಹಿತನ ಮಡದಿಯೊಂದಿಗೆ ಮರು ವೈವಾಹಿಕ ಸಂಬಂಧ ಬೆಳೆಸಿದ್ದ ಯುವಕನೋರ್ವ ನಾಯಿಗಳನ್ನು ಕೂಡಿಹಾಕುವ ಗೂಡಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಸುನೀಲ( 28) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಯುವಕ. ಬೆಂಗಳೂರು ಉತ್ತರ ತಾಲೂಕು ಮಾಚೋಹಳ್ಳಿ ಗ್ರಾಮದ ಬಡಾವಣೆಯೊಂದರಲ್ಲಿ ಮನೆಯ ಮುಂದಿನ ನಾಯಿ ಶೆಡ್‌ನಲ್ಲಿ ಸುನೀಲ ಶವ ಪತ್ತೆಯಾಗಿದೆ. ಇದು ಹೃದಯಾಘಾತ ಎಂದು ಈತನ ಜೊತೆ ಸಂಬಂಧದಲ್ಲಿದ್ದ ಆಶಾ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದ್ರೆ, ಇದು ಆಕಸ್ಮಿಕ ಸಾವಲ್ಲ, ಹೃದಯಾಘಾತದಿಂದ ನಮ್ಮ ಹುಡುಗ ಸಾವನ್ನಪ್ಪಿಲ್ಲ, ಇದು ವ್ಯವಸ್ಥಿತ ಕೊಲೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.
ಇದನ್ನೂ ಓದಿ:ಕೋರಮಂಗಲ ಡಬಲ್ ಮರ್ಡರ್ ಪ್ರಕರಣ: ಸಹೋದರರ ಸಹಿತ ಮೂವರು ಆರೋಪಿಗಳ ಬಂಧನ
ಮೃತ ಸುನೀಲ, ಆಶಾ ಮೊದಲ ಪತಿಯ ಸ್ನೇಹಿತನಂತೆ. ಮೊದಲ ಪತಿಯ ಗುಣ, ನಡತೆ ಸರಿ ಇಲ್ಲವೆಂದು ಆರೋಪಿಸಿ ಆಶಾ, ಈತನ ಜೊತೆ ಕಳೆದ 4 ವರ್ಷಗಳಿಂದ ವೈವಾಹಿಕ ಜೀವನ ಆರಂಭಿಸಿದ್ದರಂತೆ. ಆದ್ರೆ, ಸುನೀಲ ಈಕೆಯ ಕೈಹಿಡಿದ ದಿನದಿಂದ ಕುಡಿದು ಜಗಳ ಮಾಡುತ್ತಿದ್ದನಂತೆ. ಅಲ್ಲದೇ, ಕುಡಿದ ಮತ್ತಿನಲ್ಲಿ ನಾಯಿ ಗೂಡಿನಲ್ಲೇ ಮಲಗ್ತಿದ್ದನಂತೆ. ನಾಯಿ ಗೂಡಿನಲ್ಲಿ ಮಲಗಿದ್ದ ಸುನೀಲ ಇದ್ದಕ್ಕಿದ್ದಂತೆ ನಿತ್ರಾಣಗೊಂಡಿದ್ದು, ಈ ವೇಳೆ ಆಸ್ಪತ್ರೆಗೆ ಸೇರಿಸುವಾಗ ಮೃತಪಟ್ಟಿರುವುದಾಗಿ ಯುವಕನ ಜೊತೆಯಿದ್ದ ಮಹಿಳೆ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇತ್ತ ಮೃತನ ಸಂಬಂಧಿಕರು ಕೊಲೆ ಆರೋಪ ಮಾಡುತ್ತಿದ್ದು, ಆಶಾ ಬಂಧನಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ದಾವಣಗೆರೆ: ಪ್ರೇಯಸಿಯ ಕೊಲೆ ಮಾಡಿ ತಾನೂ ವಿಷ ಸೇವಿಸಿ ಪ್ರಾಣಬಿಟ್ಟ!