ಬೆಕ್ಕಿನ ಜೀವ ಉಳಿಸಲು ಹೋಗಿ ಪ್ರಾಣ ಬಿಟ್ಟ ಯುವಕ ದೊಡ್ಡಬಳ್ಳಾಪುರ: ಮರದ ಕೊಂಬೆಗಳ ನಡುವೆ ಸಿಲುಕೊಂಡಿದ್ದ ಬೆಕ್ಕಿನ ಮರಿಯನ್ನು ಕಾಪಾಡಲು ಹೋದ ಯುವಕನೊಬ್ಬ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹಾಲಿನ ಡೈರಿ ಮುಂಭಾಗದಲ್ಲಿ ನಡೆದಿದೆ. ನಡೆದಿದೆ. ರೋಷನ್ (21) ವಿದ್ಯುತ್ ತಾಗಿ ಸಾವನ್ನಪ್ಪಿರುವ ಯುವಕ ಎಂದು ಗುರುತಿಸಲಾಗಿದೆ.
ಮೃತ ಯುವಕ ನಗರದ ಇಸ್ಲಾಂಪುರದ ನಿವಾಸಿಯಾಗಿದ್ದು, ಕಳೆದ ಎರಡು ವರ್ಷಗಳಿಂದ ಇದಾಯತ್ ಎಂಬವರ ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದ. ಪ್ರಾಣಿ ಪಕ್ಷಿಗಳನ್ನು ಇಷ್ಟಪಡುತ್ತಿದ್ದ ಆತ, ಗ್ಯಾರೇಜ್ ಬಳಿ ಕೋಳಿಗಳು ಹಾಗೂ ಬೆಕ್ಕನ್ನು ಸಾಕಿಕೊಂಡಿದ್ದ. ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಬೆಕ್ಕಿನ ಮರಿ, ಇಂದು ಮಧ್ಯಾಹ್ನ ಮರದ ಕೊಂಬೆಗಳ ನಡುವೆ ಸಿಲುಕಿಕೊಂಡಿದ್ದು ಕಾಣಿಸಿದೆ. ಅದನ್ನು ಕೊಂಬೆಗಳ ನಡುವಿನಿಂದ ಕಾಪಾಡಲು ಮರ ಹತ್ತಿದ ರೋಷನ್ಗೆ ಅಲ್ಲೇ ಹಾದು ಹೋಗಿದ್ದ ವಿದ್ಯುತ್ ತಂತಿ ತಗುಲಿ, ಮರದಲ್ಲೇ ಪ್ರಾಣ ಬಿಟ್ಟಿದ್ದಾನೆ. ಈ ಘಟನೆಯ ವಿಷಯ ತಿಳಿದು ಸ್ಥಳಕ್ಕೆ ದೊಡ್ಡಬಳ್ಳಾಪುರ ಪೊಲೀಸರು ಭೇಟಿ ನೀಡಿದ್ದು, ಶವವನ್ನು ಮರದಿಂದ ಕೆಳಗಿಳಿಸಿದ್ದಾರೆ. ಅಲ್ಲದೇ, ಸ್ಥಳದಲ್ಲಿ ಅನೇಕ ಜನರು ಜಮಾವಣೆಗೊಂಡಿದ್ದರು.
ಪ್ರತ್ಯಕ್ಷದರ್ಶಿ ಲಕ್ಷಣ್ ಮಾತನಾಡಿ, "ಬೆಕ್ಕು ಮರದ ಕೊಂಬೆಗಳ ಮಧ್ಯೆ ಸಿಲುಕಿಕೊಂಡಿತ್ತು. ಈ ಹುಡುಗ ಬೆಕ್ಕು ಕೆಂಬೆಯಲ್ಲಿ ಸಿಲುಕಿಕೊಂಡಿರುವುದನ್ನು ನೋಡಿದ ಗಾಬರಿಗೆ ಮೇಲೆ ವಿದ್ಯುತ್ ತಂತಿ ಇರುವುದನ್ನು ಗಮನಿಸಿಲ್ಲ. ಮರದ ಪಕ್ಕರದಲ್ಲೆ 11 ಕೆವಿ ವಿದ್ಯುತ್ ತಂತಿ ಹಾದು ಹೋಗಿದೆ. ಮರಕ್ಕೆ ಹತ್ತಿದವನು, ಮರದ ಕೊಂಬೆ ಎಂದುಕೊಂಡು ವಿದ್ಯುತ್ ತಂತಿಯನ್ನೇ ಕೈಯಲ್ಲಿ ಹಿಡಿದುಕೊಂಡಿದ್ದಾನೆ. ವಿದ್ಯುತ್ ಅವನ ಮೈಮೇಲೆ ಪ್ರವಹಿಸಿ ಮರದಲ್ಲೇ ಅತನ ಪ್ರಾಣ ಕಳೆದುಕೊಂಡಿದ್ದಾನೆ" ಎಂದು ತಿಳಿಸಿದ್ದಾರೆ.
ಗ್ಯಾರೇಜ್ ಮಾಲೀಕ ಇದಾಯತ್ ಮಾತನಾಡಿ, "ಕಳೆದ ಎರಡು- ಮೂರು ವರ್ಷಗಳಿಂದ ಆತ ನಮ್ಮ ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದ. ಅವನೇ ಬೆಕ್ಕು ಸಾಕಿಕೊಂಡಿದ್ದ, ಅದು ಇಲ್ಲೇ ಇರುತ್ತಿತ್ತು. ಎರಡು ದಿನಗಳಿಂದ ಬೆಕ್ಕು ಕಾಣಿಸುತ್ತಿರಲಿಲ್ಲ. ಇವತ್ತು ಮರದ ಮೇಲೆ ಕಾಣಿಸಿಕೊಂಡಿತ್ತು. ಬೆಳಗ್ಗೆ 9 ಗಂಟೆಗೆ ಕೆಲಸಕ್ಕೆ ಬಂದಿದ್ದ, ನಂತರ ಮನೆಗೆ ಹೋಗಿ ಸ್ನಾನ ಮಾಡಿ, ಮತ್ತೆ 12 ಗಂಟೆಗೆ ಬಂದ. ಬಂದವನು ಜ್ಯೂಸ್ ತಂದು ಕೊಟ್ಟು, ಬೆಕ್ಕನ್ನು ಬಿಡಿಸಲು ಮರಕ್ಕೆ ಹತ್ತಿದ್ದ, ಬೆಕ್ಕಿನ ಪ್ರಾಣ ಕಾಪಾಡಲು ಮರಕ್ಕೆ ಹತ್ತಿದ್ದವನಿಗೆ ಹೀಗಾಯಿತು'' ಎಂದು ಹೇಳಿದ್ದಾರೆ.
ಇದನ್ನೂ ಓದಿ:ವಿದ್ಯುತ್ ತಂತಿಗೆ ಸಿಲುಕಿ ಒದ್ದಾಡುತ್ತಿದ್ದ ಪಾರಿವಾಳ ರಕ್ಷಿಸಿದ ಪವರ್‌ಮ್ಯಾನ್