ದೊಡ್ಡಬಳ್ಳಾಪುರ: ಜಾನುವಾರುಗಳ ಮೇವಿನ ತಾಣವಾಗಿದ್ದ ಗ್ರಾಮದ ಗೋಮಾಳ ಜಾಗವನ್ನು ಶ್ರೀಮಂತ ರೈತರು ಒತ್ತುವರಿ ಮಾಡಿಕೊಂಡಿದ್ದರು. ಈ ಜಾಗವನ್ನು ಭೂಗಳ್ಳರಿಂದ ರಕ್ಷಿಸುವಂತೆ ಗ್ರಾಮದ ಯುವಕ ಫೇಸ್ ಬುಕ್‌ನಲ್ಲಿ ಅಳಲು ತೋಡಿಕೊಂಡಿದ್ದ. ಯುವಕನ ನೋವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಿದ್ದಾರೆ.
ತಾಲೂಕು ಉಜ್ಜನಿ ಗ್ರಾಮದ ಸರ್ವೆ ನಂಬರ್ 27 ರಲ್ಲಿ 140 ಎಕರೆ ಗೋಮಾಳ ಜಾಗವಿದ್ದು, ಗ್ರಾಮದ ಜಾನುವಾರುಗಳಿಗೆ ಮೇವಿನ ತಾಣವಾಗಿತ್ತು. ಬೆಟ್ಟದಲ್ಲಿನ ಹುಲ್ಲು ಮೇಯುತ್ತಿದ್ದ ಜಾನುವಾರುಗಳು ರೈತರ ಜೀವನಕ್ಕೆ ಆಧಾರವಾಗಿದ್ದವು. ಆದರೆ ಈ ಗೋಮಾಳ ಜಾಗದ ಮೇಲೆ ಶ್ರೀಮಂತ ರೈತರ ಕಣ್ಣು ಬಿದ್ದಿದೆ. ರಾತ್ರೋರಾತ್ರಿ ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡಿ ಗೋಮಾಳವನ್ನು ಒತ್ತುವರಿ ಮಾಡುತ್ತಿದ್ದಾರೆ. ಇಡೀ ಗೋಮಾಳ ಜಾಗವನ್ನು ಒತ್ತುವರಿ ಮಾಡಿರುವ ಭೂಗಳ್ಳರು ಜಾನುವಾರುಗಳಿಗೆ ಮೇವು ಸಿಗದಂತೆ ಮಾಡಿದ್ದಾರೆ ಎಂದು ಯುವಕ ಹೇಳಿದ್ದಾನೆ.
ಉಜ್ಜನಿ ಗ್ರಾಮದ ಸರ್ವೆ ನಂ 27ರಲ್ಲಿ 140 ಎಕರೆ ಗೋಮಾಳ ಜಾಗವಿದ್ದು, ಇದರಲ್ಲಿ 19 ಎಕರೆ ಪಹಣಿಯಾಗಿದ್ದು, ಇನ್ನುಳಿದ 121 ಎಕರೆ ಸಂಪೂರ್ಣ ಒತ್ತುವರಿಯಾಗಿದೆ. ಗ್ರಾಮದಲ್ಲಿ 10 ಎಕರೆಗಿಂತ ಹೆಚ್ಚು ಇರುವ ರೈತರೇ ಗೋಮಾಳ ಜಾಗ ಒತ್ತುವರಿ ಮಾಡಿದ್ದಾರೆ. ಗ್ರಾಮದ ಬಳಿ ಇರುವ ಜಮೀನಿನಲ್ಲಿ ಹುಣಸೆ ಮರಗಳನ್ನು ಹಾಕಿ ಗೋಮಾಳ ಜಾಗ ಒತ್ತುವರಿ ಮಾಡಿ ಅಲ್ಲಿ ರಾಗಿ ಮತ್ತು ಜೋಳ ಬೆಳೆಯುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.
ಜಾನುವಾರುಗಳಿಗೆ ಮೇವಿಲ್ಲ, ಸಂಕಷ್ಟದಲ್ಲಿ ಗೋಪಾಲಕರು: ಗ್ರಾಮದಲ್ಲಿ 400ಕ್ಕೂ ಜಾನುವಾರುಗಳಿದ್ದು, 1966ರ ಭೂ ಕಂದಾಯ ನಿಯಮದ ಪ್ರಕಾರ 30 ಹಸುಗಳಿಗೆ 100 ಎಕರೆ ಗೋಮಾಳ ಜಾಗವನ್ನು ಕಾಯ್ದಿರಿಸಬೇಕು. ಆದರೆ ಭೂಗಳ್ಳರು ಜಾನುವಾರುಗಳ ಮೇವಿಗೂ ಕಲ್ಲು ಹಾಕುತ್ತಿದ್ದಾರೆ. ಗೋಮಾಳ ಜಾಗವನ್ನು ಒತ್ತುವರಿ ಮಾಡಿ ಬೇಲಿ ಹಾಕುವುದಲ್ಲದೆ ಹೊಲಕ್ಕೆ ಜಾನುವಾರುಗಳು ನುಗ್ಗಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಗೋಮಾಳ ಜಾಗ ಒತ್ತುವರಿಯಾಗುತ್ತಿರುವುದರಿಂದ ಜಾನುವಾರುಗಳನ್ನು ಸಾಕುವುದು ಕಷ್ಟವಾಗಿದೆ ಎಂದು ಗೋಪಾಲಕರು ಅಳಲು ತೊಡಿಕೊಂಡಿದ್ದಾರೆ.