ದೊಡ್ಡಬಳ್ಳಾಪುರ: ಯಡಿಯೂರಪ್ಪ ಅಷ್ಟು ಸುಲಭವಾಗಿ ಹೈಕಮಾಂಡ್ಗೆ ಬಗ್ಗುವವರಲ್ಲ. ಹೈಕಮಾಂಡ್ ಸೂಚಿಸದೇ ಯಡಿಯೂರಪ್ಪ ರಾಜಿನಾಮೆ ಕೊಡುತ್ತೇನೆಂದು ಹೇಳಿರುವುದರಲ್ಲಿ ಒಳಾರ್ಥ ಬೇರೆಯೇ ಇರುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದರು.
ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಅನ್ನ ದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಂದ ಕಾಲರಾ, ಸಿಡುಬು, ಮಲೇರಿಯ, ಹೆಚ್1-ಎನ್1 ಸೇರಿದಂತೆ 12 ರೀತಿಯ ಸಾಂಕ್ರಾಮಿಕ ರೋಗಗಳಿಗೆ ಹಿಂದಿನ ಸರ್ಕಾರಗಳು ಉಚಿತ ಲಸಿಕೆ ನೀಡಿವೆ. ಆದರೆ, ಬಿಜೆಪಿ ಸರ್ಕಾರದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಹಣ ಕೊಡಬೇಕಾದ ಪರಿಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
18 ರಿಂದ 45 ವರ್ಷದೊಳಗಿನವರಿಗೆ ಉಚಿತ ಲಸಿಕೆ ಘೋಷಣೆ ಮಾಡಿದ ಸರ್ಕಾರ, ಇದೀಗ ಲಸಿಕೆ ಇಲ್ಲವೆಂದು ಹೇಳುತ್ತಿದೆ. ಆದರೆ, ಖಾಸಗಿ ಆಸ್ಪತ್ರೆಯಲ್ಲಿ 900 ರಿಂದ 1,400 ರೂ.ಗೆ ಸಿಗುತ್ತಿದೆ. ಸರ್ಕಾರವೇ ಖಾಸಗಿ ಆಸ್ಪತ್ರೆಯಲ್ಲಿ ಹಣ ಕೊಟ್ಟು ಲಸಿಕೆ ಹಾಕಿಸಿಕೊಳ್ಳುವಂತೆ ಹೇಳುತ್ತಿದೆ. ದೇಶದ ಇತಿಹಾಸದಲ್ಲೇ ಕಾಸು ಕೊಟ್ಟು ಲಸಿಕೆ ಹಾಕಿಸಿಕೊಳ್ಳಿ ಎಂದು ಹೇಳಿದ ಮೊದಲ ಸರ್ಕಾರ ಇದು ಎಂದು ವಾಗ್ದಾಳಿ ನಡೆಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ಅಷ್ಟು ಸುಲಭವಾಗಿ ಹೈಕಮಾಂಡ್ಗೆ ಬಗ್ಗುವವರಲ್ಲ
ಯಡಿಯೂರಪ್ಪ ರಾಜೀನಾಮೆ ಎಂಬುದು ಅವರ ಆಂತರಿಕ ವಿಚಾರ. ಅವರ ಪಕ್ಷದಲ್ಲಿ ಯಾರನ್ನು ಮುಖ್ಯಮಂತ್ರಿ ಮಾಡಬೇಕು, ಯಾರನ್ನ ಮಾಡಬಾರದೆಂಬುದನ್ನ ಅವರ ಪಕ್ಷದವರು ತಿರ್ಮಾನಿಸುತ್ತಾರೆ. ಯಡಿಯೂರಪ್ಪ ಅಷ್ಟು ಸುಲಭವಾಗಿ ಹೈಕಮಾಂಡ್ಗೆ ಬಗ್ಗುವವರಲ್ಲ. ಹೈಕಮಾಂಡ್ ಸೂಚಿಸದೇ ಯಡಿಯೂರಪ್ಪ ರಾಜೀನಾಮೆ ಕೊಡುತ್ತೆನೆಂದು ಹೇಳಿರುವುದರಲ್ಲಿ ರಾಜಕೀಯವಾಗಿ ಬೇರೆಯದ್ದೇ ಒಳಾರ್ಥ ಇರುತ್ತದೆ ಎಂದರು.
ಪೆಟ್ರೋಲ್ ಬೆಲೆ 100 ರೂ.
ಪೆಟ್ರೋಲ್ ದರ ಏರಿಕೆಗೆ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಬೇಕು, ಯುಪಿಎ ಸರ್ಕಾರ ಇದ್ದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ಗೆ 145 ಡಾಲರ್ ಇತ್ತು, ಆಗ ನಮ್ಮ ಸರ್ಕಾರ ಸಬ್ಸಿಡಿ ಮತ್ತು ಟ್ಯಾಕ್ಸ್ ಕಡಿಮೆ ಮಾಡಿ ಲೀಟರ್ ಪೆಟ್ರೋಲ್ 60 ರಿಂದ 70 ಕ್ಕೆ ಕೊಡಲಾಗುತ್ತಿತ್ತು. ಆದರೆ, ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಚ್ಚಾ ತೈಲದ ಬೆಲೆ 70 ರೂ.ಗಿಂತ ಕಡಿಮೆ ಇದೆ. ಮಾರುಕಟ್ಟೆಯಲ್ಲಿ ಲೀಟರ್ ಪೆಟ್ರೋಲ್ 100 ಗಡಿ ದಾಟಿದೆ. ನಮ್ಮ ಸರ್ಕಾರ ಪೆಟ್ರೋಲ್ ಮೇಲೆ 9 ರೂ. ಟ್ಯಾಕ್ಸ್ ಹಾಕಿದ್ರೆ, ಮೋದಿ ಸರ್ಕಾರ 36 ರೂ. ಟ್ಯಾಕ್ಸ್ ಹಾಕುತ್ತಿದೆ.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಲೀಟರ್ ಪೆಟ್ರೋಲ್ ಬೆಲೆ 15 ಪೈಸೆ ಏರಿಕೆಯಾದರೆ ಇದೇ ಮೋದಿ ಹಾಗೂ ಯಡಿಯೂರಪ್ಪ ಬೊಬ್ಬೆ ಹೊಡೆಯುತ್ತಿದ್ದರು. ಇಂದು ಅವರ ಬಾಯಿಗಳಿಗೆ ಬೀಗ ಹಾಕಿಕೊಂಡಿದ್ದಾರಾ ಎಂದು ಚಾಟಿ ಬೀಸಿದರು.