ದೊಡ್ಡಬಳ್ಳಾಪುರ :ಇಲ್ಲಿನ ಹೊಸಹಳ್ಳಿತಾಂಡ ಗ್ರಾಮದಲ್ಲಿ ಅಕ್ರಮ ಮದ್ಯಮಾರಾಟ ವ್ಯಾಪಕವಾಗಿದೆ. ಅಕ್ರಮ ಮದ್ಯ ಮಾರಾಟ ತಡೆಯುವಂತೆ ಗ್ರಾಮದ ಮಹಿಳೆಯರು ಒತ್ತಾಯಿಸಿದ್ದಾರೆ. ಈ ಗ್ರಾಮದಲ್ಲಿ ಲಂಬಾಣಿ ಸಮುದಾಯದ ಕುಟುಂಬಗಳು ವಾಸವಾಗಿವೆ. ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಮಹಿಳೆಯರು ಮಾಡಿರುವ ಮನವಿಗೆ ಸ್ಪಂದಿಸಿರುವ ಪೊಲೀಸ್ ಇಲಾಖೆ ಗ್ರಾಮಸಭೆ ನಡೆಸಿ ಅಕ್ರಮ ಮದ್ಯ ಮಾರಾಟಗಾರರಿಗೆ ಎಚ್ಚರಿಕೆ ನೀಡಿದೆ.
ಗ್ರಾಮದಲ್ಲಿ ಸುಮಾರು 8ಕ್ಕೂ ಅಧಿಕ ಅಂಗಡಿಗಳಲ್ಲಿ ಮದ್ಯಮಾರಾಟ ಎಗ್ಗಿಲ್ಲದೆ ನಡೆದಿದೆ. ಇದರಿಂದಾಗಿ ಗ್ರಾಮದ ಯುವಕರು ಕುಡಿತದ ಚಟಕ್ಕೆ ದಾಸರಾಗುತ್ತಿದ್ದಾರೆ. ದುಡಿಮೆ ಹಣವನ್ನು ಮದ್ಯಪಾನಕ್ಕೆ ವ್ಯಯಿಸುತ್ತಿದ್ದಾರೆ. ಕುಡಿತದ ಚಟಕ್ಕೆ ಗ್ರಾಮದ ಹರೀಶ್ ನಾಯ್ಕ್ ಎಂಬ ಪ್ರತಿಭಾವಂತ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಯುವಕ ಹರೀಶ್ ನಾಯ್ಕ್ ಸಾವಿನ ಬಳಿಕ ಎಚ್ಚೆತ್ತ ಗ್ರಾಮಸ್ಥರು ಮದ್ಯ ಮಾರಾಟಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ.