ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಅಂದಾಜು5 ಸಾವಿರಕ್ಕೂ ಹೆಚ್ಚು ಮೃತದೇಹಗಳ ಅಂತಿಮ ಸಂಸ್ಕಾರ ಮಾಡುವ ಮೂಲಕ ಇಲ್ಲೊಬ್ಬ ಮಹಿಳೆ ಗಮನ ಸೆಳೆದಿದ್ದಾರೆ. ಈ ಮೊದಲು ಪತಿ, ಪತ್ನಿ ಒಟ್ಟಾಗಿ ಶವಸಂಸ್ಕಾರ ಮಾಡುವ ಕಾಯಕ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಪತಿಯ ನಿಧನಾ ನಂತರ ಸ್ಮಶಾನದಲ್ಲೇ ವಾಸವಿದ್ದು ಶವ ಸುಡುವ ಕಾರ್ಯವನ್ನು ಮಹಿಳೆ ಮುಂದುವರಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದಿಂದ ಸುಮಾರು ಮೂರು ಕಿ.ಮೀ ದೂರದಲ್ಲಿರುವ ಮುಕ್ತಿಧಾಮ ಸತ್ತವರಿಗೆ ಸದ್ಗತಿ ಕೂಡುವ ತಾಣ. ಇಲ್ಲಿಗೆ ಬಂದಾಗ ಮೊದಲು ಗಮನ ಸೆಳೆಯುವುದು ಹೆಣ ಸುಡುವುದನ್ನೇ ಕಾಯಕ ಮಾಡಿಕೊಂಡಿರುವ ಸುಮಾರು 60 ವರ್ಷದ ಲಕ್ಷ್ಮಮ್ಮ. ಈ ಕಾಲಘಟ್ಟದಲ್ಲಿಯೂ ಸ್ಮಶಾನಕ್ಕೆ ಹೋಗುವುದಕ್ಕೂ ಹೆದರುವ ಜನರಿರುವ ಸಮಾಜದಲ್ಲಿ ಈಕೆ ಇಲ್ಲಿಯವರೆಗೂ ಐದು ಸಾವಿರಕ್ಕೂ ಹೆಚ್ಚು ಶವಗಳಿಗೆ ಮುಕ್ತಿ ಕೊಟ್ಟಿದ್ದಾರೆ.
ನಗರದ ದೇವಾಂಗ ಮಂಡಳಿಯ ಪರಿಶ್ರಮದಿಂದ 2001ರಲ್ಲಿ ಮುಕ್ತಿಧಾಮ ಪ್ರಾರಂಭವಾಗಿದೆ. ಅಂದಿನಿಂದಲೇ ಪತಿ ಉಮಾಶಂಕರ್ ಅವರೊಂದಿಗೆ ಹೆಣ ಸುಡುವ ಕೆಲಸ ಆರಂಭಿಸಿದ್ದರು ಲಕ್ಷ್ಮಮ್ಮ. ಏಳು ವರ್ಷಗಳ ಹಿಂದೆ ಪತಿ ನಿಧನರಾಗಿದ್ದು ನಂತರ ಲಕ್ಷ್ಮಮ್ಮ ಇದೇ ಕಾಯಕವನ್ನು ಒಬ್ಬಂಟಿಯಾಗಿಯೇ ನಡೆಸುತ್ತಿದ್ದಾರೆ. ಮುಕ್ತಿಧಾಮದಲ್ಲಿ ಪ್ರತಿದಿನ ಒಂದೆರಡು ಶವಗಳಿಗೆ ಸಂಸ್ಕಾರವನ್ನು ಇವರು ಮಾಡುತ್ತಿದ್ದಾರೆ. ಇಲ್ಲಿಗೆ ಶವ ಬರುವುದಕ್ಕೂ ಮುನ್ನ ಸಿಲಿಕಾನ್ ಪೆಟ್ಟಿಗೆಯಲ್ಲಿ ಸೌದೆಗಳನ್ನು ಜೋಡಿಸಲಾಗುತ್ತದೆ. ನಂತರ ಸೌದೆಯ ಮೇಲೆ ಹೆಣವಿಟ್ಟು, ಮತ್ತೆ ಸೌದೆಗಳನ್ನು ಜೋಡಿಸುತ್ತಾರೆ. ಒಂದು ಹೆಣ ಸಂಪೂರ್ಣವಾಗಿ ಸುಟ್ಟು ಬೂದಿಯಾಗಲು ಸುಮಾರು 5 ರಿಂದ 6 ತಾಸು ತಗಲುತ್ತದೆ. ಹೆಣ ಸಂಪೂರ್ಣವಾಗಿ ಬೂದಿಯಾಗುವವರೆಗೂ ಲಕ್ಷ್ಮಮ್ಮ ಕಾಯುತ್ತಾರೆ. ದೇವಾಂಗ ಮಂಡಳಿಯಿಂದ ಕೊಡುವ 6 ಸಾವಿರ ರೂಪಾಯಿ ಮತ್ತು ಮೃತರ ಕಡೆಯಿಂದ ಸಿಗುವ ಹಣದಿಂದ ಇವರು ಬದುಕು ಸಾಗಿಸುತ್ತಿದ್ದಾರೆ.