ದೇವನಹಳ್ಳಿ (ಬೆಂ.ಗ್ರಾಮಾಂತರ):ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಗೇಜ್ ಬ್ಯಾಗ್ ಕದ್ದೊಯ್ದಿದ್ದ ಯುವತಿಯನ್ನು ಬಂಧಿಸುವಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯಿಂದ 2.5 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.
ಮೈಸೂರಿನ ಶ್ಯಾಮ್ ಶರ್ಮಾ ಎಂಬುವರು 2020ರ ಅಕ್ಟೋಬರ್ 23ರಂದು ಇಂಡಿಗೋ ವಿಮಾನದಲ್ಲಿ ಜೈಪುರದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನಕ್ಕೆ ಆಗಮಿಸಿದ್ದರು. ಏರ್ಪೋರ್ಟ್ನ ಬ್ಯಾಗೇಜ್ ಬೆಲ್ಟ್ ಬಳಿ ತಮ್ಮ ಲಗೇಜ್ ತೆಗೆದುಕೊಳ್ಳಲು ಹೋದಾಗ ನಾಲ್ಕು ಬ್ಯಾಗ್ಗಳ ಪೈಕಿ ಒಂದು ಬ್ಯಾಗ್ ನಾಪತ್ತೆಯಾಗಿತ್ತು. ಈ ಬಗ್ಗೆ ಇಂಡಿಗೋ ಏರ್ಲೈನ್ಸ್ಗೆ ದೂರು ನೀಡಿದ್ದರು.
ಸಿಸಿ ಕ್ಯಾಮರಾ ಪುಟೇಜ್ ಪರಿಶೀಲನೆ ನಡೆಸಿದಾಗ ಅಪರಿಚಿತ ಯುವತಿಯೋರ್ವಳು ಶ್ಯಾಮ್ ಶರ್ಮಾರ ಲಗೇಜ್ ತೆಗೆದುಕೊಂಡು ಹೋಗಿರುವುದು ಗಮನಕ್ಕೆ ಬಂದಿತ್ತು. ಬ್ಯಾಗ್ ಕಳುವಾಗಿರುವ ಬಗ್ಗೆ ಶ್ಯಾಮ್ ಶರ್ಮಾ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ:ಒಂದು ಕೋಟಿ ರೂಪಾಯಿ ಲಂಚ ಪಡೆದ ಆರೋಪ: ರೈಲ್ವೆ ಅಧಿಕಾರಿ ಸೆರೆ
ಪ್ರಕರಣದ ತನಿಖೆ ನಡೆಸಿದ ಕೆಐಎಎಲ್ ಪೊಲೀಸರು ಜೈಪುರ ಮೂಲದ ಸಾಕ್ಷಿ ರಾಥೋಡ್ (23) ಎಂಬ ಯುವತಿಯನ್ನು ಬಂಧಿಸಿದ್ದಾರೆ. ಆರೋಪಿ ಜೈಪುರದಿಂದ ಸ್ನೇಹಿತರನ್ನು ಭೇಟಿಯಾಗಲು ಬೆಂಗಳೂರಿಗೆ ಆಗಮಿಸಿದ್ದಳು. ಈ ವೇಳೆ ಶ್ಯಾಮ್ ಶರ್ಮಾ ಲಗೇಜ್ ತೆಗೆದುಕೊಂಡು ಹೋಗಿದ್ದಳು. ಏರ್ಪೋರ್ಟ್ ಭದ್ರತಾ ಸಿಬ್ಬಂದಿಗೆ ಸಿಕ್ಕಿ ಬೀಳುವ ಭಯಕ್ಕೆ ಮತ್ತೆ ಫ್ಲೈಟ್ನಲ್ಲಿ ಹೋಗದೆ ರಸ್ತೆ ಮಾರ್ಗವಾಗಿ ಜೈಪುರ ತಲುಪಿದ್ದಳು. ಬಂಧಿತ ಆರೋಪಿಯಿಂದ 2.5 ಲಕ್ಷ ಮೌಲ್ಯದ 55 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.