ದೊಡ್ಡಬಳ್ಳಾಪುರ :ಕುಡಿಯುವ ನೀರಿಗಾಗಿ ತಿರುಮಗೊಂಡಹಳ್ಳಿ ಗ್ರಾಮದ ಮಹಿಳೆಯರು ಆಗ್ರಹಿಸಿದ್ದಾರೆ. ಅಲ್ಲದೆ, ಹಾಡೋನಹಳ್ಳಿ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ತಾಲೂಕಿನ ತಿರುಮಗೊಂಡನಹಳ್ಳಿಯಲ್ಲಿ ನೀರಿಗಾಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ.
ಹೀಗಾಗಿ, ಖಾಲಿ ಬಿಂದಿಗೆಗಳನ್ನು ಹಿಡಿದು ಪಂಚಾಯತ್ ಕಚೇರಿ ಮುಂದೆ ಜಮಾಯಿಸಿದ ಮಹಿಳೆಯರು ಸಮರ್ಪಕವಾಗಿ ನೀರು ಪೂರೈಕೆ ಮಾಡದ ಪಂಚಾಯತ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿದರು. 'ನಾವು ಮನುಷ್ಯರೇ, ನಮಗೂ ನೀರು ಕೊಡಿ. ನೀರು ಕೊಡದಿದ್ದರೆ ಪಂಚಾಯತ್ ಖಾಲಿ ಮಾಡಿಕೊಂಡು ಹೋಗಿ' ಎಂದು ತಮ್ಮ ಅಸಮಾಧಾನ ಹೊರ ಹಾಕಿದರು.
ಹಲವು ತಿಂಗಳುಗಳಿಂದ ನೀರು ಕೊಡಿ ಎಂದು ಮನವಿ ಸಲ್ಲಿಸಿದರೂ ನಿರ್ಲಕ್ಷ್ಯವಹಿಸುತ್ತಿದ್ದೀರಿ. ಈ ಧೋರಣೆ ಸರಿಯೇ? ಎಂದು ಪ್ರಶ್ನಿಸಿದರು. ಜಿಲ್ಲಾ ಪಂಚಾಯತ್ ಸಿಇಒ ರವಿಕುಮಾರ್ ಅಥವಾ ತಾಲೂಕು ಪಂಚಾಯತ್ ಇಒ ಸ್ಥಳಕ್ಕೆ ಬರುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.