ದೇವನಹಳ್ಳಿ (ಬೆಂ.ಗ್ರಾ): ಸ್ನಾನ ಮುಗಿಸಿ ಹೊರಗೆ ಬರುತ್ತಿದ್ದ ವೇಳೆ ಗೋಡೆ ಕುಸಿದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ದೇವನಹಳ್ಳಿ ತಾಲೂಕಿನ ದೇವನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಾವಿತ್ರಮ್ಮ (50) ಮೃತಪಟ್ಟ ದುರ್ದೈವಿ.
ಬಡ ಕುಟುಂಬದವರಾಗಿದ್ದ ಮೃತ ಸಾವಿತ್ರಮ್ಮ ಶೆಡ್ ರೀತಿಯ ಮನೆ ನಿರ್ಮಿಸಿಕೊಂಡಿದ್ದರು. ಮನೆಯ ಒಳಗಡೆಯೇ ಸ್ನಾನದ ಕೋಣೆಯಿದ್ದು, ಸ್ನಾನ ಮುಗಿಸಿಕೊಂಡು ಹೊರಗಡೆ ಬರುತ್ತಿದ್ದ ವೇಳೆ ಅವರ ಮೇಲೆಯೇ ಗೋಡೆ ಕುಸಿದು ಬಿದ್ದಿದೆ. ತಕ್ಷಣವೇ ಅಕ್ಕ ಪಕ್ಕದ ಮನೆಯವರು ಆಗಮಿಸಿ ಗೋಡೆ ಕೆಳಗೆ ಸಿಲುಕಿದ್ದ ಸಾವಿತ್ರಮ್ಮರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ವಿಧಿವಶಾತ್ ಅವರು ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.
ಇನ್ನು ಮೃತ ಸಾವಿತ್ರಮ್ಮಗೆ ನಾಲ್ವರು ಮಕ್ಕಳಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಹಾರ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸ್ಥಳೀಯರು ಹೇಳಿದ್ದೇನು?:"ಸ್ನಾನ ಮುಗಿಸಿಕೊಂಡು ಬರುತ್ತಿದ್ದ ವೇಳೆ ಮನೆಯ ಸ್ನಾನಗೃಹದ ಗೋಡೆ ಕುಸಿದು ಬಿದ್ದಿದೆ. ಅದರೊಳಗೆ ಸಾವಿತ್ರಮ್ಮ ಸಿಲುಕಿ ಹಾಕಿಕೊಂಡಿದ್ದರು. ಈ ವೇಳೆ ಅಲ್ಲೇ ಅಕ್ಕ ಪಕ್ಕದಲ್ಲಿದ್ದ ಜನರು ಅವರನ್ನು ಹೊರತೆಗೆದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇಲ್ಲೇ ಒಂದೆರಡು ಆಸ್ಪತ್ರೆಯಲ್ಲಿ ಆಗುವುದಿಲ್ಲವೆಂದು ವೈದ್ಯರು ಹೇಳಿದ ಕಾರಣ ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಸಾವಿತ್ರಮ್ಮ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಈಗ ಪಂಚಾಯಿತಿ ಅಥವಾ ಸರ್ಕಾರದಿಂದ ಮನೆಯವರಿಗೆ ಪರಿಹಾರ ನೀಡಬೇಕೆಂದು ನಾವು ಆಗ್ರಹಿಸುತ್ತೇವೆ" ಎಂದು ಸ್ಥಳೀಯ ನಿವಾಸಿ ಕೃಷ್ಣಪ್ಪ ಹೇಳಿದ್ದಾರೆ.