ಆನೇಕಲ್: ಯಾರಿಗೂ ಗೊತ್ತಾಗದ ಹಾಗೆ ತಡರಾತ್ರಿ ವೇಳೆ ಗ್ರಾಮಸ್ಥರ ಕಣ್ಣುತಪ್ಪಿಸಿ ಅಕ್ರಮವಾಗಿ ಕಸವನ್ನು ಸುರಿದು ಸಾಗುತ್ತಿದ್ದ ವಾಹನಗಳನ್ನು ಗ್ರಾಮಸ್ಥರು ಹಿಡಿದಿರುವ ಘಟನೆ ದೊಡ್ಡ ತೋಗೂರು ಪಂಚಾಯಿತಿಯ ಮೈಲಸಂದ್ರ ಗ್ರಾಮದಲ್ಲಿ ನಡೆದಿದೆ.
ಕಸ ಹಾಕುತ್ತಿದ್ದವರನ್ನು ನೇರವಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು ತಡರಾತ್ರಿ ಮೈಲಸಂದ್ರ ಗ್ರಾಮದಲ್ಲಿ ಕಸ ಸುರಿದು ಹೋಗುತ್ತಿದ್ದ 5 ಟಿಪ್ಪರ್ ಲಾರಿಗಳನ್ನು ಗ್ರಾಮದ ಯುವಕರು ಹಿಡಿದಿದ್ದಾರೆ. ಈ ವೇಳೆ ಲಾರಿ ಚಾಲಕರು ಗ್ರಾಮಸ್ಥರ ಕೈಗೆ ಸಿಗದೆ ಪರಾರಿಯಾಗಿದ್ದಾರೆ.
ಇದೇ ರೀತಿಯಾಗಿ ಕಳೆದ ಮೂರು-ನಾಲ್ಕು ತಿಂಗಳಿಂದ ಅಕ್ರಮವಾಗಿ ಕಸ ಡಂಪ್ ಆಗುತ್ತಿದ್ದುದು ಗ್ರಾಮಸ್ಥರ ಗಮನಕ್ಕೆ ಬಂದಿತ್ತು. ಇದಕ್ಕಾಗಿ ರಾತ್ರಿ ವೇಳೆ ತಂಡೋಪತಂಡವಾಗಿ ಕಾದು ಕುಳಿತರೂ ಕಸ ಸುರಿಯುತ್ತಿದ್ದ ಮಾಹಿತಿ ಸಿಕ್ಕಿರಲಿಲ್ಲ. ಹೀಗಿರುವಾಗ ಗುರುವಾರ ರಾತ್ರಿಯಿಡೀ ಮಾಹಿತಿ ಬಹಿರಂಗವಾಗದಂತೆ ಗುಪ್ತವಾಗಿ ಕಾವಲು ಕಾಯುತ್ತಿದ್ದು, ಕೊನೆಗೂ ಟಿಪ್ಪರ್ ಸಿಕ್ಕಿ ಹಾಕಿಕೊಂಡಿದೆ.
ಮುಂಜಾನೆ 10 ಲಾರಿಗಳು ಕಸದೊಂದಿಗೆ ಯುವಕರ ಗುಂಪಿಗೆ ಸಿಕ್ಕಿದ್ದು, ಲಾರಿ ಚಾಲಕರು ಐದು ಲಾರಿ ಬಿಟ್ಟು ಪರಾರಿಯಾಗಿದ್ದಾರೆ. ಲಾರಿ ಟೈರ್ಗಳ ಗಾಳಿ ತೆಗೆದು ಕ್ವಾರಿ ಬಳಿಯೇ ನಿಲ್ಲಿಸಲಾಗಿದೆ. ಈ ಸಂಬಂಧ ಗ್ರಾಮಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.