ಹಲ್ಲೊಗೊಳಗಾದ ಗ್ರಾಮಸ್ಥರ ಹೇಳಿಕೆ ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಸನಿಹವೇ ಇರುವ ತೋಟವೊಂದರಲ್ಲಿ, ಬೆಂಗಳೂರಿನಿಂದ ಬಂದ ಯುವಕರ ಗುಂಪೊಂದು ಹುಕ್ಕಾ ಪಾರ್ಟಿ ನಡೆಸಿ ಮದ್ಯದ ನಶೆಯಲ್ಲಿ ಗ್ರಾಮಸ್ಥರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಪಾಲ್ ಪಾಲ್ ದಿನ್ನೆ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.
ನಶೆಯಲ್ಲಿದ್ದ ಹುಡುಗರ ಅಟ್ಟಹಾಸಕ್ಕೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದು, ಸುಮಾರು 40 ರಿಂದ 45 ಹುಡುಗರು, ಕೈಯಲ್ಲಿ ಬಿಯರ್ ಬಾಟಲ್ ಮತ್ತು ಮಾರಕಾಸ್ತ್ರಗಳನ್ನ ಹಿಡಿದು ಗ್ರಾಮಕ್ಕೆ ನುಗ್ಗಿ, ಮಹಿಳೆಯರನ್ನ ನಿಂದಿಸಿ, ಅಡ್ಡ ಬಂದವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ದಕ್ಷಿಣ ಭಾರತದ ಪ್ರಸಿದ್ಧ ನಾಗಾರಧನೆಯ ಕ್ಷೇತ್ರ ಘಾಟಿ ಸುಬ್ರಹ್ಮಣ್ಯಕ್ಕೆ ಕೇವಲ 2 ಕಿ.ಮೀ ದೂರದಲ್ಲಿ ಪಾಲ್ ಪಾಲ್ ದಿನ್ನೆ ಗ್ರಾಮ ಇದ್ದು, ಗ್ರಾಮದ ಮೂಲಕವೇ ಘಾಟಿ ಕ್ಷೇತ್ರಕ್ಕೆ ಹಾದು ಹೋಗಬೇಕಾಗಿದೆ. ಗ್ರಾಮಕ್ಕೆ ಅಂಟಿಕೊಂಡಿರುವಂತೆಯೇ ಯುವಕರು ಪಾರ್ಟಿ ನಡೆಸಿರುವ ತೋಟವಿದೆ. ಬೆಂಗಳೂರಿನಿಂದ ಬರುವ ಯುವಕರು ಆಗಾಗ ಈ ತೋಟದಲ್ಲಿ ಪಾರ್ಟಿಗಳನ್ನ ಅಯೋಜನೆ ಮಾಡುತ್ತಾರೆ, ನಿನ್ನೆಯೂ ಸಹ ಯಲಹಂಕದಿಂದ ಬಂದಿದ್ದ 45 ಹುಡುಗರು ಪಾರ್ಟಿಯನ್ನ ಆಯೋಜನೆ ಮಾಡಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಬೆಳಗ್ಗೆ 12 ಗಂಟೆ ಯಿಂದ ರಾತ್ರಿ 7 ಗಂಟೆಯವರೆಗೂ ಪಾರ್ಟಿ ನಡೆಸಿದ್ದಾರೆ. ನಶೆಯ ಅಮಲಿನಲ್ಲಿದ್ದ ಕೆಲವು ಹುಡುಗರು ರಾತ್ರಿ 7 ಗಂಟೆಗೆ ತೋಟದಿಂದ ಹೊರಗೆ ಬಂದಿದ್ದಾರೆ. ಗ್ರಾಮದ ಬಸ್ ನಿಲ್ದಾಣದಲ್ಲಿ ಬಿಯರ್ ಬಾಟಲ್ ಒಡೆದು ಹಾಕಿದ್ದಾರೆ, ಬಿಯರ್ ಬಾಟಲ್ಗಳನ್ನ ಇಲ್ಲಿ ಯಾಕೆ ಒಡೆಯುತ್ತಿರೆಂದು ಕೇಳಿದ್ದಕ್ಕೆ ಗ್ರಾಮಸ್ಥರ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಕೈಯಲ್ಲಿ ಬಿಯರ್ ಬಾಟಲ್ , ಕತ್ತಿ ಚೂರಿ ಚಾಕು ಹಿಡಿದು ಗ್ರಾಮಕ್ಕೆ ನುಗಿದ್ದಾರೆ, ಶಶಿಕುಮಾರ್, ಶಿವಶಂಕರ್, ಧನುಷ್ ಮತ್ತು ಶಿವಕುಮಾರ್ ಎನ್ನುವವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಪ್ರಶ್ನೆ ಮಾಡಿದರ ಮನೆಗೆ ನುಗ್ಗಿ ಮಹಿಳೆಯರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಲಾಗಿದೆ. ನಶೆ ಹುಡುಗಾರ ಅಟ್ಟಹಾಸದಿಂದ ರೊಚ್ಚಿಗೆದ್ದ ಗ್ರಾಮಸ್ಥರು ಒಟ್ಟಾಗಿ ಹುಡುಗರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಕೆಲವು ಹುಡುಗರ ಸ್ಥಳದಿಂದ ಕಾಲ್ಕಿತ್ತಿದ್ದಾರೆ, ಕೆಲವರನ್ನ ಹಿಡಿದು ಪೊಲೀಸರ ವಶಕ್ಕೆ ನೀಡಲಾಗಿದೆ.
ಪಾರ್ಟಿ ಮಾಡಲು ಬಂದಿದ್ದ ಹುಡುಗರ ವಾಹನಗಳಲ್ಲಿ ಮಾರಕಾಸ್ತ್ರಗಳು ಸೇರಿದಂತೆ ಮಾದಕ ವಸ್ತುಗಳನ್ನು ನೋಡಿರುವುದಾಗಿ ಗ್ರಾಮಸ್ಥರು ಹೇಳಿದ್ದಾರೆ. ತೋಟದಲ್ಲಿ ಹುಕ್ಕಾ ತಂದಿದ್ದ ವಸ್ತುಗಳು ಸಹ ಪತ್ತೆಯಾಗಿವೆ, ಹಲ್ಲೆ ನಡೆಸಿದ ಯುವಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಗ್ರಾಮಸ್ಥರು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ಊರಿಗೆ ತೆರಳಲು ನಿಲ್ಲಿಸದ ಬಸ್ಗೆ ಕಲ್ಲೆಸೆದ ಮಹಿಳೆ.. 5000 ದಂಡ, ಅದೇ ಬಸ್ನಲ್ಲಿ ಪ್ರಯಾಣ