ಕರ್ನಾಟಕ

karnataka

ETV Bharat / state

ಬಸವ ಕಲ್ಯಾಣದಿಂದ ಕೈ ಟಿಕೆಟ್ ಗಿಟ್ಟಿಸಿದರಾ ಧರಂ ಪುತ್ರ ವಿಜಯ್ ಸಿಂಗ್ ? - ಬಸವಕಲ್ಯಾಣದಿಂದಲೇ ಸ್ಪರ್ಧಿಸಲು ಸಂಪೂರ್ಣ ಸಿದ್ಧತೆ

ಈಗ ಕ್ಷೇತ್ರದಲ್ಲಿ ಮತ್ತೊಮ್ಮೆ ಟಿಕೆಟ್ ಗಿಟ್ಟಿಸಿಕೊಳ್ಳಲು ವಿಜಯ್ ಸಿಂಗ್ ಪ್ರಯತ್ನ ನಡೆಸಿದ್ದಾರೆ. ಇದಕ್ಕಾಗಿ ಎರಡನೇ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸುವ ಆಸಕ್ತಿಯನ್ನು ಅವರು ತೋರಿಸಿಲ್ಲ. ತಮ್ಮ ಬದಲು ಬೇರೆಯವರಿಗೆ ಸ್ಪರ್ಧೆಗೆ ಅವಕಾಶ ನೀಡಿದ್ದಾರೆ. ಈಗಾಗಲೇ 2023ರ ವಿಧಾನಸಭೆ ಚುನಾವಣೆಗೆ ಬಸವಕಲ್ಯಾಣದಿಂದಲೇ ಸ್ಪರ್ಧಿಸಲು ಸಂಪೂರ್ಣ ಸಿದ್ಧತೆ ನಡೆಸಿರುವ ಅವರು ನಾಲ್ಕಾರು ತಿಂಗಳು ಮುನ್ನವೇ ರಾಜ್ಯ ಕಾಂಗ್ರೆಸ್ ನಾಯಕರ ಮನೆಗಳಿಗೆ ಭೇಟಿ ನೀಡಲು ಆರಂಭಿಸಿದ್ದಾರೆ.

ಬಸವಕಲ್ಯಾಣದಿಂದ ಕೈ ಟಿಕೆಟ್ ಗಿಟ್ಟಿಸಿದ್ರಾ ಧರಂ ಪುತ್ರ ವಿಜಯ್ ಸಿಂಗ್ ?
Vijay Singh son of Dharam singh got congress ticket from Basavakalyan

By

Published : Nov 11, 2022, 5:44 PM IST

Updated : Nov 11, 2022, 5:54 PM IST

ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಕೆಲ ತಿಂಗಳು ಬಾಕಿ ಇರುವಾಗಲೇ ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದಿಂದ ತಮಗೆ ಕಾಂಗ್ರೆಸ್ ಟಿಕೆಟ್ ಅಂತಿಮವಾಗಿದೆ ಎಂದು ಮಾಜಿ ಸಿಎಂ ಧರಂ ಸಿಂಗ್ ಪುತ್ರ ಹಾಗೂ ಮಾಜಿ ಎಂಎಲ್‌ಸಿ ವಿಜಯ್ ಸಿಂಗ್ ಹೇಳುತ್ತಿದ್ದಾರೆ.

ಸ್ಥಳೀಯವಾಗಿ ಏಳೆಂಟು ಮಂದಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಪ್ರಬಲ ಪೈಪೋಟಿ ನಡೆಸಿರುವ ಸಂದರ್ಭದಲ್ಲಿ ಪಕ್ಕದ ಕಲಬುರ್ಗಿ ಜಿಲ್ಲೆಯ ನಿವಾಸಿಯಾಗಿರುವ ವಿಜಯ್ ಸಿಂಗ್ ಪೈಪೋಟಿ ನಡೆಸಿದ್ದು ಸ್ಥಳೀಯವಾಗಿ ಒಂದಿಷ್ಟು ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದ ಬಿ. ನಾರಾಯಣ್ ರಾವ್ ಕೋವಿಡ್​​ನಿಂದ ಚೇತರಿಸಿಕೊಳ್ಳದೇ ನಿಧನರಾಗಿದ್ದು 2021 ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಶರಣು ಸಲಗರ್ ಗೆಲುವು ಸಾಧಿಸಿದ್ದಾರೆ. ಆ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ವಿಜಯ್ ಸಿಂಗ್ ತಮಗೆ ಟಿಕೆಟ್ ನೀಡುವಂತೆ ಪಕ್ಷದ ಮೇಲೆ ಒತ್ತಡ ಹೇರಿದ್ದರು.

ಆದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ನಾರಾಯಣ್ ರಾವ್ ಪತ್ನಿ ಮಾಲಾ ಅವರಿಗೆ ಉಪಚುನಾವಣೆಯಲ್ಲಿ ಟಿಕೆಟ್ ಕೊಡಿಸಿದ್ದರು. ಆ ಸಂದರ್ಭದಲ್ಲಿ ಬೇಸರಗೊಂಡಿದ್ದ ವಿಜಯ ಸಿಂಗ್ ಹಾಗೂ ಸ್ಥಳೀಯ ಹತ್ತಕ್ಕೂ ಹೆಚ್ಚು ಅಭ್ಯರ್ಥಿಗಳು ಪಕ್ಷದ ಪರವಾಗಿ ಪ್ರಚಾರಕ್ಕೆ ಇಳಿದಿರಲಿಲ್ಲ.

ಅನುಕಂಪದ ಅಲೆ ಮೇಲೆ ಗೆಲುವನ್ನು ನಿರೀಕ್ಷಿಸುತ್ತಿದ್ದ ಕಾಂಗ್ರೆಸ್​ಗೆ ತೀವ್ರ ಆಘಾತ ಎದುರಾಗಿತ್ತು. ಕೋವಿಡ್ ಸಂದರ್ಭದಲ್ಲಿ ಜನರ ನಡುವೆ ಇದ್ದು ಸಾಕಷ್ಟು ಸಾಮಾಜಿಕ ಕೆಲಸ ಮಾಡಿದ್ದ ಶರಣು ಸಲಗರ್ ಕೈಹಿಡಿಯುವ ಕಾರ್ಯವನ್ನ ಕ್ಷೇತ್ರದ ಮತದಾರರು ಮಾಡಿದ್ದರು.

ಈಗ ಪೈಪೋಟಿ ಆರಂಭ: ಈಗ ಕ್ಷೇತ್ರದಲ್ಲಿ ಮತ್ತೊಮ್ಮೆ ಟಿಕೆಟ್ ಗಿಟ್ಟಿಸಿಕೊಳ್ಳಲು ವಿಜಯ್ ಸಿಂಗ್ ಪ್ರಯತ್ನ ನಡೆಸಿದ್ದಾರೆ. ಇದಕ್ಕಾಗಿ ಎರಡನೇ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸುವ ಆಸಕ್ತಿಯನ್ನು ಅವರು ತೋರಿಸಿಲ್ಲ. ತಮ್ಮ ಬದಲು ಬೇರೆಯವರಿಗೆ ಸ್ಪರ್ಧೆಗೆ ಅವಕಾಶ ನೀಡಿದ್ದಾರೆ. ಈಗಾಗಲೇ 2023ರ ವಿಧಾನಸಭೆ ಚುನಾವಣೆಗೆ ಬಸವಕಲ್ಯಾಣದಿಂದಲೇ ಸ್ಪರ್ಧಿಸಲು ಸಂಪೂರ್ಣ ಸಿದ್ಧತೆ ನಡೆಸಿರುವ ಅವರು ನಾಲ್ಕಾರು ತಿಂಗಳು ಮುನ್ನವೇ ರಾಜ್ಯ ಕಾಂಗ್ರೆಸ್ ನಾಯಕರ ಮನೆಗಳಿಗೆ ಭೇಟಿ ನೀಡಲು ಆರಂಭಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಶ್ರೀರಕ್ಷೆ ಹೊಂದಿರುವ ಇವರಿಗೆ ಸದ್ಯಕ್ಕೆ ತೊಡಕಾಗಿರುವುದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ. ತಮ್ಮ ಆಪ್ತ ಹಾಗೂ ಮರಾಠ ಸಮುದಾಯದ ಪ್ರಮುಖ ನಾಯಕ ಪಿಜಿಆರ್ ಸಿಂಧ್ಯಾಗೆ ಬಸವಕಲ್ಯಾಣದಿಂದ ಸ್ಪರ್ಧೆಗೆ ಅವಕಾಶ ನೀಡುವ ಭರವಸೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ ಎಂಬ ಮಾಹಿತಿ ಇದೆ.

ಆದ್ದರಿಂದ ವಿಜಯ ಸಿಂಗ್ ಈಗ ಸಿದ್ದರಾಮಯ್ಯ ಮನೆಯತ್ತಲೇ ಹೆಚ್ಚು ಸುಳಿಯುತ್ತಿದ್ದಾರೆ. ಎಲ್ಲ ರೀತಿಯಲ್ಲಿಯೂ ಗೆಲ್ಲುವ ಸಾಮರ್ಥ್ಯ ತಮಗೆ ಇದೆ ಎಂಬುದನ್ನು ಇವರು ತೋರಿಸಿಕೊಡುವ ಪ್ರಯತ್ನ ನಡೆಸಿದ್ದಾರೆ. ಬೆಂಗಳೂರಿನಲ್ಲಿಯೇ ಕಳೆದ ಕೆಲ ದಿನಗಳಿಂದ ಬೀಡು ಬಿಟ್ಟಿರುವ ಅವರು ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ತಮ್ಮ ಪ್ರಭಾವ ಬೀರುವ ಪ್ರಯತ್ನ ನಡೆಸಿದ್ದಾರೆ.

ಆರು ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್​​ ಗೆದ್ದಿದೆ;1957 ರಿಂದ ಇಲ್ಲಿಯವರೆಗೂ ನಡೆದಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಆರು ಬಾರಿ ಹಾಗೂ ಬಿಜೆಪಿ ಮೂರು ಬಾರಿ ಗೆಲುವು ಸಾಧಿಸಿದೆ. ಮರಾಠ ಹಾಗೂ ಲಿಂಗಾಯತ ಸಮುದಾಯದ ಹೆಚ್ಚು ಮತದಾರರನ್ನು ಒಳಗೊಂಡಿರುವ ಬಸವಕಲ್ಯಾಣದಿಂದ ಮತ್ತೊಮ್ಮೆ ಗೆಲ್ಲುವ ಪ್ರಯತ್ನವನ್ನು ಶರಣು ಸಲಗರ್ ಮಾಡಲಿದ್ದಾರೆ.

ಪ್ರಸ್ತುತ ಮತದಾರರ ಒಲವು ಸಹ ಇವರ ಮೇಲೆ ಹೆಚ್ಚಿದ್ದು ಇದನ್ನು ಬದಲಿಸುವ ಕಾರ್ಯವನ್ನು ತಾವು ಮಾಡುವುದಾಗಿ ವಿಜಯ್ ಸಿಂಗ್ ತಿಳಿಸಿದ್ದಾರೆ. ತಂದೆ ಧರ್ಮಸಿಂಗ್ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ಸೋದರ ಡಾ. ಅಜಯ್ ಸಿಂಗ್ ಶಾಸಕರಾಗಿದ್ದು, ಹಾಲಿ ವಿಧಾನಸಭೆ ಪ್ರತಿಪಕ್ಷದ ಸಚೇತಕರಾಗಿದ್ದಾರೆ. ಕುಟುಂಬ ರಾಜಕಾರಣಕ್ಕೆ ಮಣೆ ಹಾಕುತ್ತಾರೆ ಎಂಬ ಆರೋಪ ಕೇಳಿ ಬರುವ ಸಾಧ್ಯತೆ ಇದೆಯಾದರೂ ಆರ್ಥಿಕವಾಗಿ ಸಬಲರಾಗಿರುವ ವಿಜಯ್ ಸಿಂಗ್ ಗೆ ಟಿಕೆಟ್ ನೀಡುವ ವಿಚಾರವಾಗಿ ಕಾಂಗ್ರೆಸ್​​ನಲ್ಲಿಯೂ ಒಲವು ವ್ಯಕ್ತವಾಗಿದೆ ಎಂಬ ಮಾತಿದೆ.

ಟಿಕೆಟ್ ಖಚಿತವಾಗಿದೆ: ಇನ್ನೊಂದೆಡೆ ಈ ಟಿವಿ ಭಾರತ ಜೊತೆ ಮಾತನಾಡಿರುವ ವಿಜಯ್ ಸಿಂಗ್, ಪಕ್ಷದಿಂದ ತಮಗೆ ಟಿಕೆಟ್ ನೀಡುವ ಭರವಸೆ ಸಿಕ್ಕಿದೆ ಎಂದಿದ್ದಾರೆ. ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದಿಂದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಬಲ ಆಕಾಂಕ್ಷಿ ನಾನು. ಸ್ಥಳೀಯವಾಗಿ ಸಾಕಷ್ಟು ಪೈಪೋಟಿ ಇರುವುದು ಸಹಜ. ನಾರಾಯಣರಾವ್ ಕುಟುಂಬದ ಸದಸ್ಯರು ಸಹ ಟಿಕೆಟ್ ಕೇಳುತ್ತಿದ್ದಾರೆ. ಆದರೆ ಎಲ್ಲ ರೀತಿಯಿಂದಲೂ ಬಸವಕಲ್ಯಾಣಕ್ಕೆ ತಾವು ಸೂಕ್ತ ಎಂದು ಪಕ್ಷ ಪರಿಗಣಿಸಿದೆ. ನನಗೆ ಟಿಕೆಟ್ ಸಿಗುವುದು ಖಚಿತ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಸವಕಲ್ಯಾಣ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ವಿಚಾರ: ಎದುರಾಗಲಿದೆಯೇ ಸಿದ್ದು- ಡಿಕೆಶಿ ನಡುವೆ ಸಂಘರ್ಷ?

Last Updated : Nov 11, 2022, 5:54 PM IST

ABOUT THE AUTHOR

...view details