ಆನೇಕಲ್:ವಿವಿಧತೆಯಲ್ಲಿ ಏಕತೆ ಭಾರತದ ವಿಶೇಷತೆ, ಹಿಂದೆ ಭಾರತಕ್ಕೆ ಅಧ್ಯಯನಕ್ಕೆಂದು ವಿದೇಶಿಗರು ಬರುತ್ತಿದ್ದ ಕಾಲವೊಂದಿತ್ತು. ಈ ಕಾರಣಕ್ಕಾಗಿ ದೇಶದ ಸಾರ್ವಭೌಮತೆ ಎತ್ತಿ ಹಿಡಿಯುವ ಮೂಲಕ ಇಲ್ಲಿನ ಸಂಸ್ಕೃತಿಯನ್ನು ಉಳಿಸಬೇಕಿದೆ. ಆಧ್ಯಾತ್ಮಿಕತೆ ಎಂದರೆ ಧರ್ಮದ ಆರಾಧನೆಯಲ್ಲ, ಧರ್ಮ ವ್ಯಕ್ತಿಯ ವೈಯಕ್ತಿಕ ಆಯ್ಕೆಯಾಗಬೇಕು. ಹೀಗಾಗಿ ಜಾತಿ, ಮತ, ಭಾಷೆ ಮತ್ತು ಲಿಂಗದ ಹೆಸರಲ್ಲಿ ಹೇರಿಕೆ ಸರಿಯಲ್ಲ ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಕರೆ ನೀಡಿದರು.
ತಾಲೂಕಿನ ಸರ್ಜಾಪುರ-ವರ್ತೂರು ಮುಖ್ಯ ರಸ್ತೆಯಗ್ರೀನ್ ವುಡ್ ಹೈ ಇಂಟರ್ನ್ಯಾಷನಲ್ ವಿದ್ಯಾಸಂಸ್ಥೆಯಲ್ಲಿ ನಾಟಕ, ನಾಟ್ಯಕ್ಕೆ ಮೀಸಲಿಟ್ಟ ಒಳಾಂಗಣವನ್ನು ಲೋಕಾರ್ಪಣೆಗೊಳಿಸಿ ವೇದಿಕೆಯಲ್ಲಿ ಮಾತನಾಡಿದರು. ದೇಶದ ಪ್ರತಿಯೊಬ್ಬರಿಗೂ ಮಾತೃ ಭಾಷೆ ಅನಿವಾರ್ಯವಾಗಬೇಕು. ಅದು ಕಣ್ಣಿದ್ದಂತೆ ಅದನ್ನು ಜೋಪಾನ ಮಾಡಿಕೊಳ್ಳಬೇಕು. ಬೇರೆ ಭಾಷೆ ಕನ್ನಡಕವಿದ್ದಂತೆ ಎಂದು ಸಾರಿದರು.
ಶಿಕ್ಷಣ ವ್ಯವಹಾರಿಕ ಉಧ್ಯಮವಾಗಬಾರದು. ಬದಲಿಗೆ ಮಾನವೀಯತೆಯ ಗುರಿಯತ್ತ ಸಾಗುವ ಕಲೆ ಸಂಸ್ಕೃತಿ ನಾಟಕ, ನಾಟ್ಯ, ಸಂಗೀತಗಳ ಮೂಲಕ ಪಠ್ಯೇತರ ಚಟುವಟಿಕೆಗಳ ಮೂಲಕ ದೇಶವನ್ನು ಕಟ್ಟುವ ಕೆಲಸದತ್ತ ಮುಖ ಮಾಡಬೇಕು ಎಂದರು.