ಬೆಂಗಳೂರು: ಪರಕೀಯರಿಂದ ರಾಷ್ಟ್ರವನ್ನು ವಿಮುಕ್ತಗೊಳಿಸಿ ಧರ್ಮ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಮಹನೀಯರಿಗೆ ಇಂದು ಕ್ಷತ್ರಿಯರು ವೀರ ನಮನ ಸಲ್ಲಿಸಿದರು.
ಬೆಂಗಳೂರಿನ ಸದಾಶಿವನಗರ ವೃತ್ತದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯಿಂದ ಮೆರವಣಿಗೆ ನಡೆದು ನಂತರ ವೀರ ಕ್ಷಾತ್ರ ನಮನ ಹೆಸರಿನಲ್ಲಿ ಸಮಾವೇಶ ನಡೆಯಿತು. 'ಹಿಂದೂ ಸಮಾಜದ ಸಾಮರಸ್ಯಕ್ಕಾಗಿ ಒಂದು ಹೆಜ್ಜೆ' ಎಂಬ ಘೋಷವಾಕ್ಯದಡಿ ನಡೆದ ಕಾರ್ಯಕ್ರಮದಲ್ಲಿ ನಗರದ ವಿವಿಧ ಭಾಗದಲ್ಲಿರುವ ಮಹನೀಯರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಕಾರ್ಯ ನೆರವೇರಿತು.
ನಗರದಲ್ಲಿ ಕರ್ನಾಟಕ ಕ್ಷತ್ರಿಯ ಒಕ್ಕೂಟ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಒಕ್ಕೂಟದ ಮುಖ್ಯಸ್ಥ ವಿಜಯ್ ಸಿಂಗ್ ಅವರಿಂದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಪೂಜೆ ಹಾಗೂ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಗರದೆಲ್ಲೆಡೆ ಅತ್ಯಂತ ವ್ಯವಸ್ಥಿತವಾಗಿ ಸಂಚರಿಸಿ ಎಲ್ಲಿಯೂ ಸಮಸ್ಯೆಯಾಗದ ರೀತಿ ಕ್ಷತ್ರಿಯ ಒಕ್ಕೂಟದ ಪ್ರತಿನಿಧಿಗಳು ವಿವಿಧ ಪ್ರತಿಮೆಗಳಿಗೆ ಮಾಲಾರ್ಪಣೆ ನೆರವೇರಿಸಿದರು.
ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ವಿಜಯ್ ಸಿಂಗ್, ನಾವೆಲ್ಲರೂ ಒಂದು ಎಂಬುದನ್ನು ಸಾರುವ ಸಲುವಾಗಿ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಎಲ್ಲಾ ಸಮಾಜಗಳಲ್ಲಿಯೂ ಸಾಮರಸ್ಯ ಸಾರಬೇಕು ಎನ್ನುವುದು ಕೂಡ ನಮ್ಮ ಉದ್ದೇಶವಾಗಿತ್ತು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲ ಮಹನೀಯರನ್ನು ನಾವು ನೆನೆಯಲೇ ಬೇಕು ಎಂಬುದನ್ನು ಸಾರುವ ಉದ್ದೇಶದಿಂದ ಇಂಥದ್ದೊಂದು ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ದೇಶಕ್ಕೋಸ್ಕರ ಹಾಗೂ ಧರ್ಮಕ್ಕೋಸ್ಕರ ಇವರು ಮಹಾನ್ ಕೊಡುಗೆ ನೀಡಿದ್ದಾರೆ. ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ನಾವು ಅವರಿಗೆ ನಮನ ಸಲ್ಲಿಸುತ್ತಿದ್ದೇವೆ. ನಮ್ಮೆಲ್ಲರ ನಡುವಿನ ಆಂತರಿಕ ಕಲಹದಿಂದಾಗಿ ಮಹನೀಯರಿಗೆ ಅಪಕೀರ್ತಿ ತರುತ್ತಿದ್ದೇವೆ. ಅಂಥದ್ದೊಂದು ಕಾರ್ಯ ನಿಲ್ಲಬೇಕು ಎಂಬ ಉದ್ದೇಶದಿಂದಲೇ ಇಂದು ಈ ಕಾರ್ಯಕ್ರಮ ನಡೆಸಿದ್ದೇವೆ ಎಂದರು.