ಬೆಂಗಳೂರು:ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ, ಹೋರಾಟಗಾರ ವಾಟಾಳ್ ನಾಗರಾಜ್, ಔರಾದ್ಕರ್ ವರದಿ ಜಾರಿ ಹಾಗೂ ಸದನದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ವಿರೋಧಿಸಿ ಪ್ರತಿಭಟನೆ ನಡೆಸಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸಪ್ಪನ ವೇಷದಲ್ಲಿ ಬಂದ ವಾಟಾಳ್ ಆರಕ್ಷಕರ ವಶಕ್ಕೆ... ಕಾರಣ? - ವಾಟಾಳ್ ನಾಗರಾಜ್ ಇತ್ತೀಚಿನ ಸುದ್ದಿ
ಪ್ರತಿಭಟನೆ ವೇಳೆ ವಿಧಾನಸೌಧ ಪ್ರವೇಶಿಸಲು ಮುಂದಾದ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ, ಹೋರಾಟಗಾರ ವಾಟಾಳ್ ನಾಗರಾಜ್ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಇಂದು ಪೊಲೀಸ್ ವೇಷಧಾರಿಯಾಗಿ, ಕ್ಯಾಮರಾ ಹಿಡಿದು ವಿನೂತನವಾಗಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್, ನಂತರ ಸುದ್ದಿಗಾರರ ಜೊತೆ ಮಾತನಾಡಿದರು. ಸ್ಪೀಕರ್ ವಿರುದ್ಧ ಗುಡುಗಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಿಂದ ಮಾಧ್ಯಮಗಳನ್ನು ದೂರ ಇಟ್ಟಿದ್ದು ಪ್ರಜಾಪ್ರಭುತ್ವ ವಿರೋಧಿ ಧೋರಣೆ. ಮಾಧ್ಯಮದವರ ಹಕ್ಕನ್ನು ಕಸಿದುಕೊಳ್ಳಲು ಸಿಎಂ ಯಡಿಯೂರಪ್ಪ ಅಥವಾ ಸ್ಪೀಕರ್ಗೆ ಅಧಿಕಾರ ಇಲ್ಲ. ಹೀಗಾಗಿ ಕೂಡಲೇ ಈ ತೀರ್ಮಾನವನ್ನು ಸಿಎಂ ಹಾಗೂ ಸ್ಪೀಕರ್ ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.
ಔರಾದ್ಕರ್ ವರದಿಯನ್ನು ಕೂಡಲೇ ಜಾರಿಗೆ ತಂದು ಈ ಮೂಲಕ ಪೊಲೀಸರಿಗೆ ಅನುಕೂಲ ಮಾಡಬೇಕು. ಇಲ್ಲದಿದ್ದಲ್ಲಿ ಕನ್ನಡ ಪರ ಹೋರಾಟಗಾರರ ಮತ್ತು ಸಂಘಟನೆಗಳ ಬೆಂಬಲದಿಂದ ಕರ್ನಾಟಕ ಬಂದ್ಗೆ ಕರೆ ಕೊಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ವಾಟಾಳ್ ಎಚ್ಚರಿಕೆ ನೀಡಿದರು. ನಂತರ ವಾಟಾಳ್ ನಾಗರಾಜ್ ವಿಧಾನಸೌಧ ಪ್ರವೇಶಿಸಲು ಮುಂದಾದಾಗ ಪೊಲೀಸರು ವಾಟಾಳ್ ಹಾಗೂ ಅವರ ಬೆಂಬಲಿಗರನ್ನು ವಶಕ್ಕೆ ಪಡೆದ್ರು. ಈ ಸಂದರ್ಭದಲ್ಲಿ ಔರಾದ್ಕರ್ ವರದಿ ಜಾರಿಯಾಗಬೇಕು. ಮಾಧ್ಯಮಗಳಿಗೆ ವಿಧಾನಸಭೆ ಪ್ರವೇಶಕ್ಕೆ ಅನುಮತಿ ಕೊಡಬೇಕೆಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.