ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ) : ಮನೆಗೆ ಬಂದ ದುಷ್ಕರ್ಮಿಗಳು ಇಬ್ಬರು ಬಾಲಕಿಯರಿಗೆ ಒತ್ತಾಯಪೂರ್ವಕವಾಗಿ ವಿಷಪ್ರಾಶನ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ದೊಡ್ಡಸಣ್ಣೆ ಗ್ರಾಮದಲ್ಲಿ ನಡೆದಿದೆ. ವಿಷ ಸೇವಿಸಿ ಇಬ್ಬರು ಬಾಲಕಿಯರು ತೀವ್ರ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ದೊಡ್ಡಸಣ್ಣೆ ಗ್ರಾಮದ ಅಶೋಕ್ ಮತ್ತು ಶಿಲ್ಪಾ ದಂಪತಿಯ ಪುತ್ರಿ ಪಲ್ಲವಿ ಎಂಬ ಬಾಲಕಿಗೆ ದುಷ್ಕರ್ಮಿಗಳಿಗೆ ವಿಷಪ್ರಾಶನ ಮಾಡಿದ್ದಾರೆ. ಬುಧವಾರ ಬೆಳಗ್ಗೆ ಅಶೋಕ್ ಮತ್ತು ಶಿಲ್ಪಾ ಹೂ ಕೊಯ್ಯಲು ಜಮೀನಿಗೆ ತೆರಳಿದ್ದರು. ಇವರು ಜಮೀನಿಗೆ ಹೋದ ಬಳಿಕ ಮನೆಗೆ ನುಗ್ಗಿದ ಕಿಡಿಗೇಡಿಗಳು ಮನೆಯಲ್ಲಿದ್ದ ಪಲ್ಲವಿಯನ್ನು ಹೆದರಿಸಿ ವಿಷವನ್ನು ಕುಡಿಸಿ ಪರಾರಿಯಾಗಿದ್ದರು. ಬಳಿಕ ಪೋಷಕರು ಪಲ್ಲವಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಇಬ್ಬರು ಬಾಲಕಿಯರಿಗೆ ವಿಷಪ್ರಾಶನ :ಈ ಘಟನೆ ಬೆನ್ನಲ್ಲೇ ಇಂದು ಬೆಳಗ್ಗೆ ಮತ್ತೆ ಬಂದ ಕಿಡಿಗೇಡಿಗಳು ಪಕ್ಕದ ಮನೆಯ ಪಲ್ಲವಿಯ ಚಿಕ್ಕಪ್ಪನ ಮಗಳಾದ ಅನುಷಾಳಿಗೂ ಇದೇ ರೀತಿ ಹೆದರಿಸಿ ವಿಷಪ್ರಾಶನ ಮಾಡಿಸಿದ್ದಾರೆ. ಇದಕ್ಕೆ ಬಾಲಕಿ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಚಾಕುವಿನಿಂದ ಕೈ ಕೊಯ್ದಿದ್ದು, ವಿಷ ಕುಡಿಯದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿ ವಿಷ ಕುಡಿಸಿದ್ದಾರೆ. ಬಳಿಕ ದುಷ್ಕರ್ಮಿಗಳು ಪರಾರಿಯಾಗುತ್ತಿದ್ದಂತೆ ಅನುಷಾ ಮನೆಯಿಂದ ಹೊರ ಬಂದು ಕಿರುಚಾಟ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ನೆರೆಹೊರೆಯವರು ಅನುಷಾಳನ್ನು ದೇವನಹಳ್ಳಿಯ ಖಾಸಗಿ ಆಸ್ವತ್ರೆಗೆ ದಾಖಲಿಸಿದ್ದಾರೆ. ಒಂದೇ ಕುಟುಂಬದ ಇಬ್ಬರು ಬಾಲಕಿಯರಿಗೆ ವಿಷಪ್ರಾಶನ ಮಾಡಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.
ಬುಧವಾರ ಪಲ್ಲವಿಗೆ ವಿಷ ಕುಡಿಸಿ ಪರಾರಿಯಾಗಿದ್ದ ದುಷ್ಕರ್ಮಿಗಳ ವಿರುದ್ಧ ಪೋಷಕರು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೂ ಇಂದು ಬೆಳಗ್ಗೆ ಮತ್ತೆ ಬಂದ ದುಷ್ಕರ್ಮಿಗಳು ಮತ್ತೋರ್ವ ಬಾಲಕಿಗೆ ವಿಷ ನೀಡಿರುವುದು ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ. ಈ ಸಂಬಂಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ :Bengaluru crime: ಗಂಡ ಹೆಂಡತಿ ಜಗಳ.. ಪತಿ ಕೈಬೆರಳು ಕಚ್ಚಿ ತಿಂದ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ!