ದೊಡ್ಡಬಳ್ಳಾಪುರ: ಎಟಿಎಂ ದರೋಡೆಗೆ ಯತ್ನಿಸಿ ವಿಫಲವಾದ ಕಳ್ಳರಿಬ್ಬರು ಪೊಲೀಸರ ಬಳಿಯೇ ಡ್ರಾಪ್ ಕೇಳಿ ಸಿಕ್ಕಿಬಿದ್ದಿರುವ ಪ್ರಕರಣ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನೆಲಮಂಗಲದ ಅರಿಶಿನಕುಂಟೆ ಗ್ರಾಮದ ಸಚಿನ್ (19) ಮತ್ತು ಗಗನ್ ಬಂಧಿತರು. ಇವರು ಫೆಬ್ರವರಿ 24 ರಂದು ಮುಂಜಾನೆ ಮೆಳೇಕೋಟೆ ಕ್ರಾಸ್ ಬಳಿ ಇರುವ ಎಟಿಎಂನಲ್ಲಿ ಹಣ ದೋಚಲು ಯತ್ನಿಸಿರುವುದನ್ನು ಸ್ಥಳೀಯರು ಗಮನಿಸಿದ್ದು, ಕೂಡಲೇ ಹಿಡಿಯಲು ಮುಂದಾಗಿದ್ದಾರೆ. ಇದನ್ನರಿತರ ಆರೋಪಿಗಳು ತಪ್ಪಿಸಿಕೊಂಡು ಓಡಿದ್ದಾರೆ.
ಇತ್ತ ಎಟಿಎಂ ದರೋಡೆ ಯತ್ನ ಮಾಹಿತಿ ತಿಳಿದ ಕೂಡಲೇ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಎಟಿಎಂ ಒಡೆಯಲು ಬಳಸಿದ್ದ ವಸ್ತುಗಳನ್ನು ಜಪ್ತಿ ಮಾಡಿಕೊಂಡು ತಪ್ಪಿಸಿಕೊಂಡಿದ್ದ ಆರೋಪಿಗಳ ಬಂಧನಕ್ಕೆ ಶೋಧ ನಡೆಸಿದ್ದರು.
ಮಫ್ತಿಯಲ್ಲಿದ್ದ ಪೊಲೀಸ್ ಸಿಬ್ಬಂದಿ, ಕಾರಿನಲ್ಲಿ ದೊಡ್ಡಬಳ್ಳಾಪುರ ಕಡೆ ಬರುತ್ತಿದ್ದಾಗ ಆರೋಪಿಗಳು ಕಾರಿಗೆ ಕೈ ಅಡ್ಡ ಹಾಕಿದ್ದು, ಡ್ರಾಪ್ ನೀಡುವಂತೆ ಕೇಳಿದ್ದಾರೆ. ಈ ವೇಳೆ ಕಳ್ಳರಿಗೆ ತಾವು ಪೊಲೀಸರ ಬಳಿಯೇ ಡ್ರಾಪ್ ಕೇಳಿದ್ದೇವೆ ಅನ್ನೋದು ಗೊತ್ತಾಗಿರಲಿಲ್ಲ. ತಾವಾಗಿಯೇ ಬಂದು ಹಳ್ಳಕ್ಕೆ ಬಿದ್ರು ಅಂತಾ ಲೆಕ್ಕಾಚಾರ ಹಾಕಿದ ಪೊಲೀಸರು, ಆರೋಪಿಗಳನ್ನು ಕಾರು ಹತ್ತಿಸಿಕೊಂಡು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.
ಇದೀಗ ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.