ಆನೇಕಲ್ : ಇಲ್ಲಿನ ದೊಮ್ಮಸಂದ್ರದ ಮುತ್ತಾನಲ್ಲೂರು ಕ್ರಾಸ್ನ ಹೆಚ್ಡಿಎಫ್ಸಿ ಬ್ಯಾಂಕ್ ಮುಂಭಾಗ ನಿಲ್ಲಿಸಿದ್ದ ಕಾರಿನ ಗಾಜು ಹೊಡೆದು ಚಿನ್ನಾಭರಣಗಳನ್ನು ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಸರ್ಜಾಪುರ ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿದ್ದ ಸುಮಾರು 60 ಲಕ್ಷ ರೂ ಮೌಲ್ಯದ ವಜ್ರ ಮತ್ತು ಚಿನ್ನದ ಒಡವೆಗಳನ್ನು ದೋಚಿದ್ದ ಅಂತಾರಾಜ್ಯ ದರೋಡೆಕೋರರನ್ನು ಸರ್ಜಾಪುರ ಇನ್ಸ್ಪೆಕ್ಟರ್ ಎಸ್.ಎಸ್.ಮಂಜುನಾಥ್ ನೇತೃತ್ವದ ತಂಡ ಬಂಧಿಸಿದೆ. ಬಂಧಿತರನ್ನು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕಾವೇಟಿಪುರಂ ಓಟಿ ಕುಪ್ಪಂ ಗ್ರಾಮದ ಪಾಂಡುರಂಗ(44) ಮತ್ತು ಅಂಕಯ್ಯ(20) ಎಂದು ಗುರುತಿಸಲಾಗಿದೆ. ಚೆನ್ನೈ ಮೂಲದ ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಸರ್ಜಾಪುರ ಗ್ರಾಮಪಂಚಾಯತಿ ಪಕ್ಕದಲ್ಲಿರುವ ಔಷಧಿ ಅಂಗಡಿ ಮಾಲೀಕ ಲಕ್ಷ್ಮಿನಾರಾಯಣ ಎಂಬುವವರು ಕಳೆದ ಫೆ. 23ರಂದು ಮಗಳ ಮದುವೆಗಾಗಿ ಅತ್ತಿಬೆಲೆಯ ಯೂನಿಯನ್ ಬ್ಯಾಂಕಿನ ಲಾಕರ್ನಲ್ಲಿ ಇಟ್ಟಿದ್ದ ಒಡವೆಯನ್ನು ಪಡೆದುಕೊಂಡಿದ್ದಾರೆ. ಅಲ್ಲಿಂದ ದಂಪತಿಯು ತಮ್ಮ ಕಾರನಲ್ಲಿ ದೊಮ್ಮಸಂದ್ರ ಕ್ರಾಸ್ನಲ್ಲಿದ್ದ ಲೈಟ್ ಶಾಪ್ವೊಂದಕ್ಕೆ ಬಂದಿದ್ದಾರೆ. ಅತ್ತಿಬೆಲೆಯಿಂದಲೇ ಲಕ್ಷ್ಮೀ ನಾರಾಯಣ ಎಂಬುವವರ ಕಾರನ್ನು ಹಿಂಬಾಲಿಸಿದ್ದರು. ಇವರೊಂದಿಗೆ ಇನ್ನಿಬ್ಬರು ಆರೋಪಿಗಳು ಇದ್ದರು.
ಈ ವೇಳೆ ದೊಮ್ಮಸಂದ್ರ ಕ್ರಾಸ್‌ನಲ್ಲಿ ಕಾರು ನಿಲ್ಲಿಸಿ ಲೈಟ್ ಶಾಪ್ಗೆ ತೆರಳಿದ್ದ ವೇಳೆ ಆರೋಪಿಗಳು ಕಾರಿನಲ್ಲಿದ್ದ ಆಭರಣಗಳನ್ನು ಎಗರಿಸಿ ಪರಾರಿಯಾಗಿದ್ದಾರೆ. ಆರೋಪಿಗಳು ಕಾರಿನ ಎಡಭಾಗದ ಕಿಟಕಿ ಗಾಜನ್ನು ಹೊಡೆದು ಒಡವೆಯ ಬ್ಯಾಗ್ ನ್ನು ಎಗರಿಸಿದ್ದರು. ಈ ವೇಳೆ ದಂಪತಿಗಳು ಕಾರಿನ ಬಳಿ ಬಂದಾಗ ಚಿನ್ನಾಭರಣ ಕಳವಾಗಿರುವುದು ಪತ್ತೆಯಾಗಿದೆ.ಕೂಡಲೇ ಲಕ್ಷ್ಮೀ ನಾರಾಯಣ ಅವರು ಇಲ್ಲಿನ ಸರ್ಜಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಳ್ಳರು ಆಭರಣಗಳನ್ನು ಕಳವು ಮಾಡಿದ್ದ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.ಪ್ರಕರಣವನ್ನು ಬೆನ್ನತ್ತಿದ್ದ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಕಳವಾದ ಒಡವೆಗಳನ್ನು ಮಾಲಕರಿಗೆ ಹಿಂತಿರುಗಿಸಿದ್ದಾರೆ.