ಯಲಹಂಕ (ಬೆಂ.ಗ್ರಾ):ಪ್ರತಿ 2 ವರ್ಷಕ್ಕೊಮ್ಮೆ ನಡೆಯುವ ಏಷ್ಯಾದ ಅತಿದೊಡ್ಡ ಏರ್ ಶೋಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಏರ್ಫೋರ್ಸ್ ಸ್ಟೇಷನ್ನಲ್ಲಿ ಫೆಬ್ರವರಿ 13ರಿಂದ 17ರವರೆಗೆ 5 ದಿನಗಳ ಏರೋ ಇಂಡಿಯಾ 2023ರ ವೈಮಾನಿಕ ಪ್ರದರ್ಶನ ನಡೆಯಲಿದೆ. ಪ್ರಪಂಚದ ವಿವಿಧ ಭಾಗಗಳಿಂದ ಜನರು ಆಗಮಿಸಲಿದ್ದು, ಲೋಹದ ಹಕ್ಕಿಗಳ ಕಸರತ್ತುಗಳನ್ನು ಕಣ್ತುಂಬಿಕೊಳ್ಳಲಿದ್ದಾರೆ.
ಈ ಹಿನ್ನೆಲೆಯಲ್ಲಿ ಯಲಹಂಕ ವಾಯುನೆಲೆಯ ಸುತ್ತಮುತ್ತಲಿನ ಸರ್ಕಾರಿ ಶಾಲಾ ಮಕ್ಕಳಿಗೆ ಏರ್ಶೋ ನೋಡಲು ಅವಕಾಶ ಮಾಡಿಕೊಡಿ ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ. ಶಿವರಾಜು ಹರಿಯಾಳ ಎಂಬವರು ಪ್ರಧಾನಿ ಟ್ವಿಟರ್ ಖಾತೆಗೆ ವಿಡಿಯೋವೊಂದನ್ನು ಟ್ಯಾಗ್ ಮಾಡಿದ್ದು, ಸರ್ಕಾರಿ ಶಾಲಾ ಮಕ್ಕಳಿಗೆ ಏರ್ ಶೋ ನೋಡಲು ಅವಕಾಶ ಕಲ್ಪಿಸುವಂತೆ ವಿನಂತಿಸಿದ್ದಾರೆ. ಟ್ಯಾಗ್ ಮಾಡಿರುವ ವಿಡಿಯೋದಲ್ಲಿ ಮಕ್ಕಳು ಶಾಲಾ ಟೆರಸ್ ಮತ್ತು ಕಾಂಪೌಂಡ್‌ಗಳ ಮೇಲೆ ನಿಂತು ಯುದ್ಧ ವಿಮಾನಗಳು ನಡೆಸುವ ಕಸರತ್ತುಗಳನ್ನು ನೋಡಿ ಎಂಜಾಯ್ ಮಾಡುತ್ತಿರುವ ದೃಶ್ಯವಿದೆ.
ಇದನ್ನೂ ಓದಿ:ಪ್ರಧಾನಿಯಿಂದ ನಾಳೆ ದೆಹಲಿ - ಮುಂಬೈ ಎಕ್ಸ್‌ಪ್ರೆಸ್‌ವೇ ಮೊದಲ ಹಂತದ ಮಾರ್ಗ ಉದ್ಘಾಟನೆ