ದೇವನಹಳ್ಳಿ (ಬೆಂ.ಗ್ರಾಮಾಂತರ):ಲ್ಯಾಪ್ಟಾಪ್ನಲ್ಲಿ ಕ್ರೆಡಿಟ್ ಕಾರ್ಡ್ನಂತೆ ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದ ಆರೋಪಿಯನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಯಿಂದ 55.06 ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದಾರೆ. ಸೆಪ್ಟೆಂಬರ್ 17ರಂದು ಅಬುಧಾಬಿಯಿಂದ ಅಹಮದಾಬಾದ್ ಮಾರ್ಗವಾಗಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದನು.
ಆರೋಪಿ ಬೆಂಗಳೂರಿನಿಂದ ಚೆನೈಗೆ ಪ್ರಯಾಣಿಸುವ ಸಿದ್ಧತೆಯಲ್ಲಿದ್ದ. ಲಗೇಜ್ಗಳನ್ನು ತಪಾಸಣೆ ಮಾಡುವಾಗ ಲ್ಯಾಪ್‌ಟಾಪ್‌ನೊಳಗೆ ಕ್ರೆಡಿಟ್ ಕಾರ್ಡ್ ರೂಪದಲ್ಲಿ ಚಿನ್ನ ಸಾಗಿಸುವ ಯತ್ನ ನಡೆಸಿರುವುದು ಬೆಳಕಿಗೆ ಬಂದಿದೆ. 28 ಲ್ಯಾಪ್‌ಟಾಪ್, 30 ಐಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಹಿಂದಿನ ಪ್ರಕರಣಗಳು- ಕಾಗದದ ಹಾಳೆಗಳ ನಡುವೆ ಚಿನ್ನ:ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಅಕ್ರಮವಾಗಿ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದರು. ಆರೋಪಿ ಪ್ರಯಾಣಿಕ ದುಬೈನಿಂದ ಮಂಗಳೂರಿಗೆ ಏರ್ ಇಂಡಿಯಾ ವಿಮಾನದಲ್ಲಿ ಬಂದಿಳಿದಿದ್ದನು. ರಟ್ಟಿನ ಪೆಟ್ಟಿಗೆಯ ಒಳಭಾಗದಲ್ಲಿ ಇರಿಸಲಾಗಿದ್ದ 4 ನೀಲಿ ಬಣ್ಣದ ದಪ್ಪದ ಕಾಗದದ ಹಾಳೆಗಳ ಎರಡು ಪದರಗಳ ನಡುವೆ ಚಿನ್ನದ ಪೌಡರ್ ಅಡಗಿಸಿಡಲಾಗಿತ್ತು. ಕಸ್ಟಮ್ಸ್ ಅಧಿಕಾರಿಗಳು ಅಕ್ರಮ ಪತ್ತೆ ಹಚ್ಚಿ, ಬಚ್ಚಿಟ್ಟ 242 ಗ್ರಾಂ ಚಿನ್ನದ ಪುಡಿಯನ್ನು ವಶಪಡಿಸಿಕೊಂಡಿದ್ದರು. ಇದರ ಮೌಲ್ಯ 14.50 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಅಧಿಕಾರಿಗಳು ಪ್ರಯಾಣಿಕನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರಿಸಿದ್ದಾರೆ.
8.23 ಕೆ.ಜಿ ಚಿನ್ನ ಪತ್ತೆ:ದುಬೈನಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಪ್ರಯಾಣಿಕರೊಬ್ಬರು ಅಕ್ರಮ ಚಿನ್ನ ಸಾಗಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್(ಡಿಆರ್ಐ) ಅಧಿಕಾರಿಗಳು ಇಬ್ಬರು ಪ್ರಯಾಣಿಕರನ್ನು ವಶಕ್ಕೆ ಪಡೆದಿದ್ದರು. ವಶಕ್ಕೆ ಪಡೆದ ಪ್ರಯಾಣಿಕರಿಂದ ಸುಮಾರು 4.54 ಕೋಟಿ ಮೌಲ್ಯದ 8.23 ಕೆಜಿ ಚಿನ್ನವನ್ನು ವಶಪಡಿಕೊಂಡಿದ್ದರು.
ಲಗೇಜ್ ಬ್ಯಾಗ್ ನಟ್ ಬೋಲ್ಟ್ನಲ್ಲಿ ಚಿನ್ನ: ಲಗೇಜ್ ಬ್ಯಾಗ್ಗೆ ಚಿನ್ನದ ನಟ್ ಬೋಲ್ಟ್ ಅಳವಡಿಸಿ ಅಧಿಕಾರಿಗಳ ಕಣ್ತಪ್ಪಿಸಿ ಚಿನ್ನ ಸಾಗಿಸಲು ಯತ್ನಿಸಿದ ಪ್ರಯಾಣಿಕನೊಬ್ಬ ಸಿಕ್ಕಿಬಿದ್ದಿದ್ದ . ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪ್ರಯಾಣಿಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬ್ಯಾಗ್ ಕಂಡು ಕೆಲಕಾಲ ದಂಗಾಗಿದ್ದರು.
ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಸ್ಟ್ 18 ರಂದು ದುಬೈನಿಂದ ಎಮಿರೇಟ್ಸ್ ವಿಮಾನ ಸಂಖ್ಯೆ 568ರಲ್ಲಿ ಪ್ರಯಾಣಿಕನೊಬ್ಬ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವ ಮಾಹಿತಿ ಬಂದಿತ್ತು. ಅದರಂತೆ ಆದಾಯ ತೆರಿಗೆ ಇಲಾಖೆಯ ವಾಯು ಗುಪ್ತಚರ ಘಟಕವು ಪ್ರಯಾಣಿಕನನ್ನು ವಶಕ್ಕೆ ಪಡೆದು, ಆತನ ಲಗೇಜ್ ಬ್ಯಾಗ್ ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಯಾಣಿಕನು ತನ್ನ ಲಗೇಜ್ ಬ್ಯಾಗ್ಗೆ ಚಿನ್ನದ ನಟ್ ಬೋಲ್ಟ್ಗಳನ್ನು ಅಳವಡಿಸಿಕೊಂಡು ಅಕ್ರಮವಾಗಿ ವಿದೇಶದಿಂದ ಚಿನ್ನ ಸಾಗಿಸಲು ಯತ್ನಿಸಿದ್ದ. ಇದನ್ನು ಕಂಡುಕೊಂಡ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು 267 ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ:ಅಕ್ರಮವಾಗಿ ವಿದೇಶದಿಂದ ಇ-ಸಿಗರೇಟ್ ಸಾಗಣೆ: ಬೆಂಗಳೂರು ಕಸ್ಟಮ್ಸ್‌ಗೆ ಸಿಕ್ಕಿಬಿದ್ದ ಸ್ಮಗ್ಲರ್ಸ್