ದೇವನಹಳ್ಳಿ: ಪ್ರಯಾಣ ನಿಷೇಧಿತ ದೇಶವಾದ ಯಮನ್ ದೇಶಕ್ಕೆ ಭಾರತೀಯ ಪಾಸ್‌ಪೋರ್ಟ್ ಬಳಸಿ ಪ್ರಯಾಣಿಸಿದ ಪ್ರಯಾಣಿಕನ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಮೂಲದ 33 ವರ್ಷದ ಶೇಖ್ ಮಹಮ್ಮದ್ ಸೂಫಿಯಾನ್ ಭಾರತೀಯ ಪಾಸ್‌ಪೋರ್ಟ್ ಬಳಸಿ ನಿಷೇಧಿತ ದೇಶವಾದ ಯಮನ್ಗೆ ಪ್ರಯಾಣಿಸಿದ ಹಿನ್ನೆಲೆ ಪ್ರಕರಣ ದಾಖಲಾಗಿದೆ. ಡಿಸೆಂಬರ್ 12 ರಂದು ಶೇಖ್ ಮಹಮ್ಮದ್ ಸೂಫಿಯನ್ ಸುಡಾನ್ ಶಾರ್ಜಾ ಮಾರ್ಗವಾಗಿ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
ಏರ್ಪೋರ್ಟ್ನ ಇಮಿಗ್ರೇಷನ್ ಅಧಿಕಾರಿಗಳು ಪ್ರಯಾಣಿಕನ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಯಮನ್ ದೇಶದಲ್ಲಿ ಕೆಲಸ ಮಾಡಿರುವುದು ಬೆಳಕಿಗೆ ಬಂದಿದೆ. ಶೇಖ್ ಮಹಮ್ಮದ್ ಸೂಫಿಯಾನ್ 2012ರಲ್ಲಿ ಸೌದಿ ಅರೇಬಿಯಾಕ್ಕೆ ಹೋಗಿ ನಜರಾನಲ್ಲಿ ಸೇಲ್ಸ್ಮ್ಯಾನ್ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮಾಡುತ್ತಿದ್ದ ಕಂಪನಿಯ ಬ್ರಾಂಚ್ ಯಮನ್ ದೇಶದ ಅಡೆನ್ನದಲ್ಲಿಯೂ ಇದೆ.
ಭಾರತೀಯ ಪಾಸ್ಪೋರ್ಟ್ನಲ್ಲಿಯೇ ಯಮನ್ ದೇಶಕ್ಕೆ ಹೋಗಿ ಕೆಲಸ ಮಾಡಿದ್ದರು. 26/09/2017 ರ ಭಾರತ ಸರ್ಕಾರದ ಗೆಜೆಟ್ ನೋಟಿಫಿಕೇಷನ್ ಪ್ರಕಾರ ಭಾರತೀಯ ಪ್ರಜೆಯು ಭಾರತೀಯ ಪಾಸ್‌ಪೋರ್ಟ್ ಬಳಸಿಕೊಂಡು ಯಮನ್ ದೇಶಕ್ಕೆ ಪ್ರಯಾಣಿಸುವಂತಿಲ್ಲ. ಇದರ ಆಧಾರದ ಮೇಲೆ ಇಮಿಗ್ರೇಷನ್ ಅಧಿಕಾರಿಗಳು ನಿಷೇಧಿತ ದೇಶಕ್ಕೆ ಪ್ರಯಾಣಿಸಿದ ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.
ಇದನ್ನೂ ಓದಿ:ಆಧಾರ್, ಪಾನ್ ಕಾರ್ಡ್, ಪಾಸ್‌ಪೋರ್ಟ್ ಎಲ್ಲವೂ ಅಕ್ರಮ: ಬೆಂಗಳೂರಿನಲ್ಲಿ ನೇಪಾಳಿ ಪ್ರಜೆ ಬಂಧನ