ದೊಡ್ಡಬಳ್ಳಾಪುರ: ಡಿಸೆಂಬರ್ 15ರಿಂದ ರೈತರಿಂದ ರಾಗಿ ಖರೀದಿ ನೋಂದಣೆ ಕಾರ್ಯ ಆರಂಭವಾಗಬೇಕಿತ್ತು. ಆದರೆ ನೋಡಲ್ ಅಧಿಕಾರಿಯ ಧಿಡೀರ್ ವರ್ಗಾವಣೆಯಿಂದ ನೋಂದಣಿ ಕಾರ್ಯ ಮುಂದೂಡಲಾಗಿದೆ. ಇದರಿಂದ ರೊಚ್ಚಿಗೆದ್ದ ರೈತರು ಹೆದ್ದಾರಿಗಿಳಿದು ರಸ್ತೆ ತಡೆದು ಪ್ರತಿಭಟನೆಗೆ ಮುಂದಾದರು. ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
2022-23ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ರಾಗಿ ಖರೀದಿ ಕಾರ್ಯ ಆರಂಭವಾಗಬೇಕಿತ್ತು. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ವತಿಯಿಂದ ಖರೀದಿ ಕಾರ್ಯ ನಡೆಯುತ್ತದೆ. ಇಂದಿನಿಂದ ರೈತರಿಂದ ರಾಗಿ ಖರೀದಿ ನೋಂದಣಿ ಕಾರ್ಯ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ನೋಂದಣಿ ಮಾಡಿಸಲು ಗುರುವಾರ ಮುಂಜಾನೆಯೇ ನಗರದ ರೈತ ಭವನದ ಬಳಿ ರೈತರು ಆಗಮಿಸಿದ್ದರು.