2 ಟನ್ ಟೊಮೆಟೊ ಕದ್ದೊಯ್ದ ಕಳ್ಳರು ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ) :ಟೊಮೆಟೊ ದರ ಏರಿಯಾದ ಹಿನ್ನೆಲೆ ತೋಟಕ್ಕೆ ನುಗ್ಗಿದ ಕಳ್ಳರು 2 ಟನ್ ಟೊಮೆಟೊ ಕದ್ದೊಯ್ದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಬೈರಸಂದ್ರಪಾಳ್ಯದಲ್ಲಿ ತಡರಾತ್ರಿ ನಡೆದಿದೆ. ದಿವಾಕರ್ ಎಂಬುವರಿಗೆ ಸೇರಿದ ತೋಟದಲ್ಲಿ ಸುಮಾರು 80 ಸಾವಿರ ಮೌಲ್ಯದ ಟೊಮೆಟೊ ಕದ್ದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆ ಕುರಿತು ಮಾತನಾಡಿದ ತೋಟದ ಮಾಲೀಕರಾದ ದಿವಾಕರ್, ನಿನ್ನೆ ರಾತ್ರಿ 2 ಗಂಟೆಯವರೆಗೂ ತೋಟದಲ್ಲಿದ್ದು, ಟೊಮೆಟೊ ಬೆಳೆಗೆ ನೀರು ಬಿಟ್ಟ ಬಳಿಕ ಮನೆಗೆ ಬಂದೆವು. ತೋಟದ ಮನೆಯಲ್ಲಿದ್ದ ಕೆಲಸಗಾರರ ಕುಟುಂಬ ಹೊಸ ವರ್ಷದ ಆಚರಣೆ ಮಾಡುತ್ತಿದ್ದರು. ಮಧ್ಯರಾತ್ರಿ ಸುಮಾರು 3 ಗಂಟೆಯ ಸಮಯದಲ್ಲಿ ತೋಟಕ್ಕೆ ನುಗ್ಗಿದ ಕಳ್ಳರು ದಪ್ಪ ಗಾತ್ರದ ಟೊಮೆಟೊಗಳನ್ನು ಮಾತ್ರ ಕದ್ದು ಪರಾರಿಯಾಗಿದ್ದಾರೆ. ಸುಮಾರು 1 ಎಕರೆಯಲ್ಲಿ ಟೊಮೆಟೊ ಬೆಳೆದಿದ್ದು, ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 40 ಬೆಲೆ ಇದೆ. ಖಾಸಗಿ ಕಂಪನಿಯವರು ಅರ್ಡರ್ ಪಡೆದಿದ್ದು, ಇಂದು ಬೆಳಗ್ಗೆ 2 ಟನ್ ಟೊಮೆಟೊ ಕೊಡುವುದಾಗಿ ಹೇಳಿದ್ದೆ ಎಂದು ಅಳಲು ತೋಡಿಕೊಂಡಿದ್ದಾರೆ.
ರಾತ್ರಿ 11 ಗಂಟೆ ವರೆಗೆ ಎದ್ದಿದ್ದು, ಕರೆಂಟ್ ಬರುವುದು ತಡವಾದ ಕಾರಣ ಮಲಗಿಕೊಂಡೆವು. ಬಳಿಕ 2 ಗಂಟೆ ಸಮಯದಲ್ಲಿ ಗಿಡಗಳಿಗೆ ನೀರು ಬಿಟ್ಟಿದ್ದು, ಕರೆಂಟ್ ಹೋದ ವೇಳೆ ಮನೆಗೆ ಬಂದಿದ್ದೆವು. ಬೆಳಗ್ಗೆಟೊಮೆಟೊ ಕಾಯಿಗಳು ಗಿಡದಿಂದ ಬಿದ್ದಿರುವುದು ಕಂಡು ಕೃತ್ಯ ತಿಳಿದು ಬಂದಿದೆ. ರಾತ್ರಿ ಯಾವುದೇ ಶಬ್ಧ ಬಂದಿಲ್ಲ ಎಂದು ತೋಟದಲ್ಲಿ ಕೆಲಸ ಮಾಡುವ ಮಂಜಮ್ಮ ಎಂಬುವರು ಹೇಳಿದರು.
ಹತ್ತಿ ಫಸಲು ಕಳ್ಳತನ (ಧಾರವಾಡ) :ಇನ್ನೊಂದೆಡೆ ಡಿಸೆಂಬರ್ 26 ರಂದದು ರಾತ್ರಿ ವೇಳೆ ಜಮೀನಿನಲ್ಲಿ ಬೆಳೆದಿದ್ದ ಹತ್ತಿ ಫಸಲು ಕಳ್ಳತನ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ನಡೆದಿತ್ತು. ಮೈಲಾರಪ್ಪ ಕೂರಗುಂದ ಎಂಬವರ ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಹತ್ತಿ ಬಿಡಿಸಿಕೊಂಡು ಕಳ್ಳರ ಗ್ಯಾಂಗ್ ಪರಾರಿಯಾಗಿತ್ತು. ಹತ್ತಿ ಬಿಡಿಸುವ ಯೋಚನೆ ಮಾಡಿಕೊಂಡು ಜಮೀನಿಗೆ ಬಂದ ರೈತ ಹೊಲದಲ್ಲಿದ್ದ ಹತ್ತಿ ಮಾಯವಾಗಿದ್ದನ್ನು ನೋಡಿ ಕಣ್ಣೀರು ಹಾಕಿದರು. ಈ ಬಗ್ಗೆ ಬ್ಯಾಲ್ಯಾಳ ಗ್ರಾಮದ ರೈತರು ನವಲಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ :ಧಾರವಾಡ: ಜಮೀನಿನಲ್ಲಿದ್ದ ಹತ್ತಿ ಕಳ್ಳತನ, ರೈತ ಕಂಗಾಲು