ದೊಡ್ಡಬಳ್ಳಾಪುರ:ಸಾವನ್ನಪ್ಪಿದ್ದ ಸ್ವಂತ ಮಗುವಿನ ಶವವನ್ನು ಹೆತ್ತವರುಚರಂಡಿಯಲ್ಲಿ ಇಟ್ಟು ಹೋದ ಅಮಾನವೀಯ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.
ಉಸಿರಾಟದ ಸಮಸ್ಯೆಯಿಂದ 1 ವರ್ಷ ಹೆಣ್ಣು ಮಗು ಸಾವನ್ನಪ್ಪಿತ್ತು. ಸಾವಿನ ಬಳಿಕ ಮಗುವಿನ ಶವ ಸಂಸ್ಕಾರ ಮಾಡುವುದು ಹೇಗೆಂದು ತಿಳಿಯದೆ, ಮಗುವಿನ ಶವವನ್ನು ಚರಂಡಿಯಲ್ಲಿ ಇಟ್ಟು ಹೆತ್ತವರು ಪರಾರಿಯಾಗಿದ್ದರು. ಚರಂಡಿಯಲ್ಲಿದ್ದ ಮಗುವಿನ ಶವದ ಕೈಯಲ್ಲಿ ತಾಯತವೊಂದು ಕಟ್ಟಿದ್ದು, ಅದರ ಸಹಾಯದಿಂದ ಹೆತ್ತವರನ್ನು ಪತ್ತೆ ಮಾಡಲಾಗಿದೆ. ನಂತರ ಮಗುವಿನ ಶವ ಸಂಸ್ಕಾರ ಮಾಡಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿಯ ಬಳಿ ಯಲಹಂಕ-ಹಿಂದೂಪುರ ರಸ್ತೆ ಬದಿಯ ಚರಂಡಿಯಲ್ಲಿ ಒಂದು ವರ್ಷದ ಹೆಣ್ಣು ಮಗುವಿನ ಶವ ಪತ್ತೆಯಾಗಿತ್ತು. ಆದರೆ ಮೃತ ಮಗುವಿನ ಪೋಷಕರು ಯಾರೆಂದು ತಿಳಿದಿರಲಿಲ್ಲ. ಆದರೆ ಅನಾರೋಗ್ಯದಿಂದ ಸಾವನ್ನಪಿದ ಮಗುವನ್ನು ಇಟ್ಟು ಹೋಗಿದ್ದಾರೆಂದು ತಿಳಿಯಲಾಗಿತ್ತು. ಸ್ಥಳಕ್ಕೆ ಬಂದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದರು. ಈ ವೇಳೆ ಉತ್ತರ ಭಾರತ ಮೂಲದ ದಂಪತಿಯ ಮಗುವೆಂದು ಪ್ರಾರಂಭದಲ್ಲಿ ಮಾಹಿತಿ ತಿಳಿದಿತ್ತು. ಜೊತೆಗೆ ಮಗುವಿನ ಕೈಯಲ್ಲಿ ಸಿಕ್ಕ ತಾಯತದಿಂದ ಮೃತ ಮಗು ಉತ್ತರ ಭಾರತ ಆ ದಂಪತಿಯ ಮಗು ಅನ್ನೋದು ಖಚಿತವಾಗಿತ್ತು.
ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಬಹುತೇಕ ಉತ್ತರ ಭಾರತದಿಂದ ಬಂದ ಕಾರ್ಮಿಕರು ಇದ್ದಾರೆ. ಇದೇ ಸುಳಿವಿನ ಮೇಲೆ ಪೊಲೀಸರು ಮಗುವಿನ ಫೋಟೋ ಹಿಡಿದು ಬಾಶೆಟ್ಟಿಹಳ್ಳಿ ಸುತ್ತಮುತ್ತ ವಿಚಾರಣೆ ನಡೆಸಿದ್ದಾಗ ಹೆತ್ತವರ ಗುರುತು ಪತ್ತೆಯಾಗಿದೆ. ಬಿಹಾರದ ಪ್ರಮೇಶ್ ಮತ್ತು ವಿಭಾ ಕುಮಾರಿ ದಂಪತಿಯ ಒಂದು ವರ್ಷದ ಮಗು ರುಚಿ ಕುಮಾರಿ ಅನ್ನೋದು ಗೊತ್ತಾಗಿದೆ. ಒಂದು ವಾರದ ಹಿಂದಷ್ಟೇ ಬಿಹಾರದಿಂದ ಬಂದಿದ್ದ ಪ್ರಮೇಶ್ ಮತ್ತು ವಿಭಾ ಕುಮಾರಿ ವೀರಾಪುರ ಗ್ರಾಮದಲ್ಲಿ ವಾಸವಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಮಗು ರುಚಿ ಕುಮಾರಿ ಉಸಿರಾಟ ಸಮಸ್ಯೆಯಿಂದ ಸಾವನ್ನಪ್ಪಿದೆ. ಮಗುವಿನ ಶವ ಸಂಸ್ಕಾರ ಮಾಡುವುದು ಹೇಗೆಂಬ ಗೊಂದಲದಲ್ಲಿದ್ದ ಈ ದಂಪತಿ ಶವವನ್ನು ಚರಂಡಿಯಲ್ಲಿ ಇಟ್ಟು ಪರಾರಿಯಾಗಿದ್ದರು ಎಂದು ತಿಳಿದು ಬಂದಿರುವುದಾಗಿ ಪೊಲೀಸ್ ಸಿಬ್ಬಂದಿ ಮುನಿಕೃಷ್ಣ ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಆನೇಕಲ್: ಮಗನನ್ನೇ ಹತ್ಯೆಗೈದ ತಂದೆ