ನೆಲಮಂಗಲ: ಪೊಲೀಸರಿಂದ ಗುಂಡೇಟು ತಿಂದು ಜೈಲು ಪಾಲಾಗಿದ್ದರೂ ಹಳೆಯ ಚಾಳಿ ಬಿಡದ ಕಳ್ಳ ವಕೀಲರ ಮನೆಯಲ್ಲೇ ಕಳ್ಳತನ ಮಾಡಿದ್ದಾನೆ. ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ ಜಯಂತ್ ಅಲಿಯಾಸ್ ಬ್ಯಾಟರಿ ಜಯಂತ್ ಮತ್ತೊಮ್ಮೆ ಪೊಲೀಸರ ಅತಿಥಿಯಾಗಿದ್ದಾನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ಸುಭಾಷ್ ನಗರದ ನಿವಾಸಿ ವಕೀಲ ಹನುಮಂತರಾಯಪ್ಪ ಇದೇ ತಿಂಗಳ 11 ನೇ ತಾರೀಖು ಪಿತೃಪಕ್ಷಕ್ಕೆಂದು ತಮ್ಮ ಊರಿಗೆ ತೆರಳಿದ್ದರು. ಈ ವೇಳೆ, ಪಕ್ಕದ ಮನೆಯಲ್ಲೇ ಇದ್ದುಕೊಂಡು ಹೊಂಚುಹಾಕಿದ್ದ ಆರೋಪಿ ಜಯಂತ್ ಹಾಗೂ ಉಮೇಶ್ ಐದು ಲಕ್ಷ ಮೌಲ್ಯದ ಚಿನ್ನಾಭರಣವನ್ನು ದರೋಡೆ ಮಾಡಿ ಪರಾರಿಯಾಗಿದ್ದರು.
ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ವ್ಯಕ್ತಿ ಮತ್ತೆ ಕಳ್ಳತನ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಈ ದರೋಡೆ ಮಾಡಲು ಸರಿ ಸುಮಾರು ನಾಲ್ಕೈದು ತಿಂಗಳುಗಳಿಂದ ಆರೋಪಿಗಳು ಹೊಂಚು ಹಾಕಿದ್ದು, ಸಂಪೂರ್ಣ ರೂಪುರೇಷೆ ರಚಿಸಿಕೊಂಡು ದರೋಡೆಗೆ ಯತ್ನಿಸಿ ಐದು ಲಕ್ಷ ಮೌಲ್ಯದ ಚಿನ್ನಾಭರಣವನ್ನು ಅಪಹರಿಸಿ ಪರಾರಿಯಾಗಿದ್ದರು.
ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲ ನಗರ ಪೊಲೀಸರು ಇನ್ಸ್ಪೆಕ್ಟರ್ಶಿವಣ್ಣ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಆಧರಿಸಿ, ಆರೋಪಿಗಳ ಚಲನವಲನಗಳನ್ನ ಗಮನಿಸಿ ಅನುಮಾನದ ಮೇಲೆ ಆರೋಪಿಗಳಾದ ಜಯಂತ್‌ನನ್ನು ವಿಚಾರಣೆ ನಡೆಸಿದಾಗ ಜಯಂತ್ ತನ್ನ ಸ್ನೇಹಿತ ಉಮೇಶನೊಂದಿಗೆ ಸೇರಿಕೊಂಡು ದರೋಡೆ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾನೆ.