ಬೆಂಗಳೂರು: ಕುಡಿದ ಅಮಲಿನಲ್ಲಿದ್ದ ಚಾಲಕನಿಗೆ ಎಎಸ್ಐ ಒಬ್ಬರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಹೊಸಕೋಟೆಯ ಸಂತೆ ಗೇಟ್ ಬಳಿ ನಡೆದಿದೆ. ಸದ್ಯ ಈ ವಿಡಿಯೋವೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಠಾಣೆಯ ಎಎಸ್ಐ ಸಿದ್ದರಾಜು ಚಾಲಕನಿಗೆ ಥಳಿಸಿದ ಪೊಲೀಸಪ್ಪ. ಕಳೆದ ಬುಧವಾರ ನಗರದ ಸರ್ಕಾರಿ ಆಸ್ವತ್ರೆ ಬಳಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಸೂಲಿಬೆಲೆ ಕಡೆಯಿಂದ ಬಂದ ಇಂಡಿಯನ್ ಆಯಿಲ್ ಲಾರಿ ಚಾಲಕ ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿಕೊಂಡು ಬರ್ತಿದ್ದ. ಹಾಗಾಗಿ ಲಾರಿಯನ್ನ ನಿಲ್ಲಿಸಲು ಸೂಚಿಸಿದ್ದಾರೆ. ಆದ್ರೆ ಲಾರಿ ಚಾಲಕ ನಿಲ್ಲಿಸದೆ ಮುಂದೆ ಸಾಗಿದ ಪರಿಣಾಮ ಲಾರಿಯನ್ನ ಬೆನ್ನತಿದ ಎಎಸ್ಐ ಸಿದ್ದರಾಜು ಲಾರಿಯನ್ನ ಹೊಸಕೋಟೆ ಸಂತೆ ಗೇಟ್ ಬಳಿ ಸೈಡಿಗಾಕಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಟಾಧೀಕಾರಿ ರಾಮ್ ನಿವಾಸ್ ಸಪೇತ್ ನಂತರ ಲಾರಿಯಿಂದ ಚಾಲಕನನ್ನು ಕೆಳಗಿಳಿಸಿಕೊಂಡು ನಡು ರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹೀಗೆ ಥಳಿಸುತ್ತಿರುವ ವಿಡಿಯೊವನ್ನು ಸೆರೆ ಹಿಡಿದಿರುವ ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಲಾರಿ ಚಾಲಕ ಕುಡಿದ ಅಮಲಿನಲ್ಲಿ ಚಾಲನೆ ಮಾಡಿದ್ರೆ, ಆತನನ್ನ ಹಿಡಿದು ಠಾಣೆಗೆ ಕರೆದುಕೊಂಡು ಹೋಗುವುದು ಪೊಲೀಸರ ಕರ್ತವ್ಯ. ಆದ್ರೆ ಪೊಲೀಸರೇ ಈ ರೀತಿ ಸಾರ್ವಜನಿಕರ ಮುಂದೆ ರಸ್ತೆಯಲ್ಲಿ ಗೂಂಡಾಗಳ ರೀತಿ ವರ್ತಿಸಿದ್ರೆ ಹೇಗೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಪೊಲೀಸಪ್ಪನ ಕ್ರಮದ ವಿರುದ್ಧ ಸಾರ್ವಜನಿಕರು ಅಸಮಾಧಾನ ಹೊರ ಹಾಕಿದ್ದಾರೆ.
ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಮ್ ನಿವಾಸ್ ಸಪೇತ್ ಕುಡಿದ ಅಮಲಿನಲ್ಲಿ ಲಾರಿ ಚಾಲಕ ಲಾರಿ ಚಾಲನೆ ಮಾಡ್ತಿದ್ದ, ಲಾರಿ ನಿಲ್ಲಿಸುವಂತೆ ಡಿವೈಎಸ್ಪಿ, ಎಎಸ್ಐ ಸಿದ್ದರಾಜುಗೆ ತಿಳಿಸಿದ್ರು. ಹೀಗಾಗಿ ಲಾರಿಯನ್ನ ಅಡ್ಡಗಟ್ಟಿ ನಿಲ್ಲಿಸಿದ ಎಎಸ್ಐ ಚಾಲಕನಿಗೆ ದಂಡ ಹಾಕಿ ಕಳಿಸಿದ್ದಾರೆ. ಎಎಸ್ಐ ನಡು ರಸ್ತೆಯಲ್ಲಿ ಚಾಲಕನಿಗೆ ಹೊಡೆದಿರೋ ಬಗ್ಗೆ ಒಂದು ತಂಡವನ್ನ ರಚನೆ ಮಾಡಿ ತನಿಖೆ ನಡೆಸಲು ಆದೇಶಿಸಿದ್ದು, ಯಾರದ್ದು ತಪ್ಪಿದೆ ಅನ್ನೊದನ್ನ ತಿಳಿದುಕೊಂಡು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಕುಡಿದ ಅಮಲಿನಲ್ಲಿ ಲಾರಿ ಚಲಾಯಿಸಿದ ಚಾಲಕನನ್ನ ತಡೆದು ಆತನಿಗೆ ಕಾನೂನಿನ ಅಡಿಯಲ್ಲಿ ಬುದ್ಧಿ ಕಲಿಸುವ ಪ್ರಯತ್ನಕ್ಕೆ ಮುಂದಾದ ಎಎಸ್ಐ ಸಿದ್ದರಾಜು ಕಾರ್ಯ ಒಳ್ಳೆಯದೆ. ಆದ್ರೆ ಶಿಸ್ತಿನ ಇಲಾಖೆಯಲ್ಲಿ ಕೆಲಸ ಮಾಡುವಾಗ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಸಾರ್ವಜನಿಕರ ಎದುರು ರಸ್ತೆಯಲ್ಲಿ ತಾಳ್ಮೆ ಕಳೆದುಕೊಂಡು ವರ್ತಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂಬುದು ಎಲ್ಲರ ಪ್ರಶ್ನೆಯಾಗಿದೆ.