ಕರ್ನಾಟಕ

karnataka

ETV Bharat / state

ದೇವನಹಳ್ಳಿ: ರಾತ್ರೋರಾತ್ರಿ 200 ದಾಳಿಂಬೆ ಗಿಡ ಕತ್ತರಿಸಿದ ಕಿಡಿಗೇಡಿಗಳು, ರೈತನಿಗೆ ಆಘಾತ - miscreants escaped after cutting pomegranate trees

ರಾತ್ರೋರಾತ್ರಿ ರೈತನ ತೋಟಕ್ಕೆ ನುಗ್ಗಿದ ಕಿಡಿಗೇಡಿಗಳು 200 ದಾಳಿಂಬೆ ಗಿಡಗಳನ್ನು ಹಾಳು ಮಾಡಿದ್ದಾರೆ.

pomegranate
ದಾಳಿಂಬೆ ಗಿಡಗಳನ್ನು ಕಟಾವು ಮಾಡಿ ಎಸ್ಕೇಪ್​ ಆದ ಕಿಡಿಗೇಡಿಗಳು

By ETV Bharat Karnataka Team

Published : Nov 20, 2023, 12:36 PM IST

ದಾಳಿಂಬೆ ಗಿಡಗಳನ್ನು ಕಟಾವು ಮಾಡಿ ಎಸ್ಕೇಪ್​ ಆದ ಕಿಡಿಗೇಡಿಗಳು

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ) : ರೈತರಿಗೆ ಅತಿವೃಷ್ಟಿ, ಅನಾವೃಷ್ಟಿ ಕಾಡುತ್ತಲೇ ಇರುತ್ತವೆ. ಈ ಮಧ್ಯೆ ಕೆಲವರು ಹೇಗಾದರೂ ಮಾಡಿ ಅಲ್ಪ ಸ್ವಲ್ಪ ಬೆಳೆಯನ್ನಾದರೂ ಉಳಿಸಿಕೊಂಡು ಜೀವನ ಬಂಡಿ ಸಾಗಿಸುತ್ತಾರೆ. ಈ ಬಾರಿಯಂತೂ ಬರಗಾಲದ ಹೊಡೆತಕ್ಕೆ ಅನ್ನದಾತರು ನಲುಗಿದ್ದಾರೆ. ಈ ನಡುವೆ ಕಳೆದ ಒಂದು ವರ್ಷದಿಂದ ಕಷ್ಟಪಟ್ಟು ದಾಳಿಂಬೆ ಬೆಳೆಯನ್ನು ಉಳಿಸಿಕೊಂಡಿದ್ದ ರೈತನಿಗೆ ಒಂದೇ ದಿನದಲ್ಲಿ ಆಘಾತ ಉಂಟಾಗಿದೆ. ಇದಕ್ಕೆ ಕಾರಣ ಹುಲುಸಾಗಿ ಬೆಳೆದಿದ್ದ ದಾಳಿಂಬೆ ಗಿಡಗಳನ್ನು ಯಾರೋ ಕಡಿದು ಹಾಕಿರುವುದು.

ಹೌದು, ಆ ರೈತನಿಗೆ ಇರೋದು ಅಲ್ಪ ಸ್ವಲ್ಪ ಜಮೀನು. ಕೃಷಿಯನ್ನೇ ಕಾಯಕವಾಗಿಸಿಕೊಂಡಿರುವ ಆತ, ದಾಳಿಂಬೆ ಬೆಳೆಯಲ್ಲಿ ಸಾಧನೆ ಮಾಡಬೇಕೆಂಬ ಹಂಬಲದಿಂದ ಅಕ್ಕಪಕ್ಕದ ಜಮೀನನ್ನು ಲೀಸ್​ಗೆ ತೆಗೆದುಕೊಂಡು ಸೋಂಪಾಗಿ ದಾಳಿಂಬೆ ಗಿಡಗಳನ್ನು ಬೆಳೆದಿದ್ದ. ಆದ್ರೆ ಯಾರೋ ಕಿಡಿಗೇಡಿಗಳು ಗಿಡಗಳನ್ನು ಕಟಾವು ಮಾಡಿ ವಿಕೃತಿ ಮೆರೆದಿದ್ದಾರೆ. ಈ ದುಷ್ಕೃತ್ಯ ಕಂಡು ಅನ್ನದಾತನಿಗೆ ಆಕಾಶವೇ ಕಳಚಿ ತಲೆಮೇಲೆ ಬಿದ್ದಂತಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹ್ಯಾಡಾಳ ಗ್ರಾಮದ ವೆಂಕಟೇಗೌಡ ಎಂಬುವರಿಗೆ ಇರೋದು 11 ಗುಂಟೆ ಜಮೀನು ಮಾತ್ರ. ಆದ್ರೆ, ಕೃಷಿ ಮಾಡಿ ಅದರಿಂದಲೇ ಮೇಲೆ ಬರಬೇಕು ಎಂಬ ಛಲದಿಂದ ತನ್ನ ಜಮೀನಿನ ಪಕ್ಕದ ಬೇರೆಯವರ ಭೂಮಿಯನ್ನು ಲೀಸ್​ಗೆ ತೆಗೆದುಕೊಂಡು ಸುಮಾರು ಒಂದು ಎಕರೆ ಪ್ರದೇಶಕ್ಕೆ ದಾಳಿಂಬೆ ಬೆಳೆ ಬೆಳೆದಿದ್ದರು. ಸೋಂಪಾಗಿ ಬೆಳೆದಿದ್ದ ದಾಳಿಂಬೆ ಮೇಲೆ ಕಿಡಿಗೇಡಿಗಳ ಕಣ್ಣು ಬಿದ್ದಿದ್ದು, ರಾತ್ರೋರಾತ್ರಿ ತೋಟಕ್ಕೆ ನುಗ್ಗಿ, ಗಿಡಗಳನ್ನು ಬುಡಸಹಿತ ಕತ್ತರಿಸಿ ಹಾಕಿದ್ದಾರೆ.

ಅಂದಹಾಗೆ, ಒಂದು ಎಕರೆ ಭೂಮಿಯಲ್ಲಿ ಸುಮಾರು 400 ದಾಳಿಂಬೆ ಗಿಡಗಳನ್ನು ಬೆಳೆಯಲಾಗಿತ್ತು. ಈ ಗಿಡಗಳು ಒಂದು ವರ್ಷ 2 ತಿಂಗಳು ಪೂರೈಸಿದ್ದು, ಇನ್ನು 9 ತಿಂಗಳು ಕಳೆದಿದ್ದರೆ ಒಳ್ಳೆಯ ಫಸಲು ಸಿಗುತ್ತಿತ್ತು. ಬೆಳೆ ರೈತನ ಕೈ ಸೇರುವ ಮೊದಲೇ ಕಿಡಿಗೇಡಿಗಳು 200 ಗಿಡಗಳನ್ನು ಕಟ್ ಮಾಡಿದ್ದಾರೆ. ಇದರಿಂದ ಬೆಳೆಗಾರನಿಗೆ ಸುಮಾರು ಐದರಿಂದ 6 ಲಕ್ಷ ರೂಪಾಯಿ ನಷ್ಟವಾಗಿದೆ.

ಇದನ್ನೂ ಓದಿ :ಅಥಣಿಯಲ್ಲಿ 2 ಎಕರೆ ದಾಳಿಂಬೆ ತೋಟ ನಾಶ ಮಾಡಿದ ಯುವ ರೈತ

ದಾಳಿಂಬೆ ಗಿಡಗಳನ್ನು ಪೋಷಿಸಲು ವರ್ಷಾನುಗಟ್ಟಲೇ ಔಷಧಿ, ಕಳೆ ತೆಗೆಯುವುದು ಸೇರಿದಂತೆ ಲಕ್ಷಾಂತರ ರೂ. ಬಂಡವಾಳ ಹಾಕಿದ್ದರು. ಆದ್ರೆ, ರಾತ್ರೋರಾತ್ರಿ ಕಿಡಿಗೇಡಿಗಳು ಬೆಳೆ ನಾಶ ಮಾಡಿದ್ದರಿಂದ ರೈತನ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಕಟಾವು ಮಾಡಿರೋ ಗಿಡಗಳನ್ನು ಹಿಡಿದುಕೊಂಡು ರೈತನ ಕುಟುಂಬ ಕಣ್ಣೀರು ಹಾಕಿದೆ. ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ :ರೈತನ ಕೈ ಹಿಡಿದ ದಾಳಿಂಬೆ ಬೆಳೆ.. ಕೃಷಿಯಲ್ಲಿ ಯಶಸ್ಸು ಕಂಡ ನಿವೃತ್ತ ನೌಕರ

ABOUT THE AUTHOR

...view details