ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ದೇಶ ಹಾಗೂ ರಾಜ್ಯದ ಜನತೆ ರಾಜಕೀಯ ಬದಲಾವಣೆ ಬಯಸಿದ್ದಾರೆ. ದೇಶಾದ್ಯಂತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಾಯಕತ್ವದ ಬಗ್ಗೆ ಭರವಸೆ ಮೂಡಿದೆ ಎಂದು ದೊಡ್ಡಬಳ್ಳಾಪುರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಎಎಪಿ ಮುಖಂಡ ಭಾಸ್ಕರ್ ರಾವ್ ಹೇಳಿದ್ದಾರೆ.
ಉಚಿತ ಕೊಡುಗೆಗಳು ದೇಶವನ್ನು ಅಧೋಗತಿಗೆ ತರುತ್ತೆ ಮತ್ತು ಇವತ್ತಿನ ಶ್ರೀಲಂಕಾ ಪರಿಸ್ಥಿತಿ ಬರುತ್ತೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಆಪ್ ಪಕ್ಷದ ಮುಖಂಡ ಭಾಸ್ಕರ್ ರಾವ್ ಕಳೆದ 7 ವರ್ಷಗಳಿಂದ ದೆಹಲಿಯಲ್ಲಿ ಕೇಜ್ರಿವಾಲ್ ಸರ್ಕಾರ ಜನರಿಗೆ ಉಚಿತ ಕೊಡುಗೆಗಳನ್ನು ಕೊಡುತ್ತಲೇ ಬಂದಿದೆ. 200 ಯುನಿಟ್ ವಿದ್ಯುತ್ ಮತ್ತು 20 ಸಾವಿರ ಲೀಟರ್ ನೀರು ಮತ್ತು ಸರ್ಕಾರಿ ಬಸ್ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೇವೆ ನೀಡಲಾಗುತ್ತಿದೆ. ಈ ಎಲ್ಲಾ ಉಚಿತ ಕೊಡುಗೆಗಳನ್ನು ನೀಡಲು ಕೇಜ್ರಿವಾಲ್ ಸರ್ಕಾರ ಸಾಲ ಮಾಡಿಲ್ಲ ಎಂದರು.
ಕರ್ನಾಟಕ ಸರ್ಕಾರ ಇವತ್ತು 7.5 ಲಕ್ಷ ಕೋಟಿ ಸಾಲದ ಹೊರೆ ಇದೆ. ಆದರೆ ಅರವಿಂದ್ ಕೇಜ್ರಿವಾಲ್ ಉಚಿತ ಕೊಡುಗೆ ನೀಡಲು ಸಾಲ ಮಾಡಿಲ್ಲ ಮತ್ತು ತೆರಿಗೆಯನ್ನು ಹೆಚ್ಚು ಮಾಡಿಲ್ಲ. ಹಾಗಾದರೆ ಹಣವನ್ನು ಎಲ್ಲಿಂದ ತಂದ್ರು ಎನ್ನುವ ಪ್ರಶ್ನೆ ಬರುತ್ತದೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದು ಮತ್ತು ಸೋರಿಕೆಯನ್ನು ತಡೆಗಟ್ಟಿದ್ದರಿಂದ ಕಾಮಗಾರಿಗಳಲ್ಲಿ ಕೋಟಿ ಕೋಟಿ ಹಣವನ್ನು ಉಳಿಸಲಾಗಿದೆ. ಈ ಹಣವನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ ಎಂದು ಭಾಸ್ಕರ್ ರಾವ್ ಸ್ಪಷ್ಟಪಡಿಸಿದರು.