ದೊಡ್ಡಬಳ್ಳಾಪುರ : ನೇಕಾರರ ಆರ್ಥಿಕ ನೆರವಿಗಾಗಿ ಕೇಂದ್ರ ಸರ್ಕಾರ ನೇಕಾರ್ ಸನ್ಮಾನ್ ಯೋಜನೆ ಜಾರಿ ಮಾಡಿದೆ. ಯೋಜನೆಯಡಿ ನೇಕಾರರ ಅಕೌಂಟ್ಗೆ 5 ಸಾವಿರ ಹಣವನ್ನ ಜಮೆ ಮಾಡಲಾಗುವುದು. ಆದರೆ ಇಲಾಖೆಯ ಕೆಲವು ಲೋಪಗಳಿಂದ ನೇಕಾರಿಕೆ ವೃತ್ತಿ ಮಾಡದವರು ನೇಕಾರ್ ಸನ್ಮಾನ್ ಫಲಾನುಭವಿಗಳಾಗಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕಿ ಸೌಮ್ಯ ಅವರು ನೇಕಾರಿಕೆ ವೃತ್ತಿ ಮಾಡದವರ ಮಾಹಿತಿ ನೀಡಿದಲ್ಲಿ ಅವರ ಹೆಸರನ್ನು ಪಟ್ಟಿಯಿಂದ ತೆಗೆಯುವುದಾಗಿ ಹೇಳಿದ್ದಾರೆ.
ನೇಕಾರ್ ಸಮ್ಮಾನ್ ಯೋಜನೆಯ ವಿಚಾರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿನ ಶೇ. 30ರಷ್ಟು ನೇಕಾರರ ಖಾತೆಗೆ ಹಣ ಜಮೆಯಾಗದೆ ಇರುವ ಬಗ್ಗೆ ಗೊಂದಲ ಉಂಟಾಗಿದೆ. ದೊಡ್ಡಬಳ್ಳಾಪುರ ನಗರ ಹೊರವಲಯ ಅಪೆರಲ್ಸ್ ಪಾರ್ಕ್ ನಲ್ಲಿರುವ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ಕಚೇರಿಗೆ ನೇಕಾರರು ಭೇಟಿ ನೀಡುತ್ತಿದ್ದಾರೆ. ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಯಾಗದೆ ಇರುವುದು, ನೇಕಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದರ ಬಗ್ಗೆ ಅಧಿಕಾರಿಗಳ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ನೇಕಾರಿಕೆ ವೃತ್ತಿ ಮಾಡದವರು ನೇಕಾರ್ ಸನ್ಮಾನ್ ಯೋಜನೆಯ ಫಲಾನುಭವಿಗಳಾಗಿದ್ದು ಹೇಗೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೇಕಾರರ ಖಾತೆಗೆ ಸರ್ಕಾರದಿಂದ 5 ಸಾವಿರ ರೂಪಾಯಿ ಹಣ ಜಮೆ: ನೇಕಾರ್ ಸನ್ಮಾನ್ ಯೋಜನೆಯ ಬಗ್ಗೆ ಬಂದಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರಾದ ಸೌಮ್ಯರವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 13 ಸಾವಿರಕ್ಕಿಂತ ಹೆಚ್ಚು ನೇಕಾರರಿದ್ದೂ, ದೇವನಹಳ್ಳಿ, ನೆಲಮಂಗಲ, ಹೊಸಕೋಟೆ ತಾಲೂಕಿನಲ್ಲಿ ತಲಾ 400 ರಿಂದ 500 ನೇಕಾರರಿದ್ದಾರೆ. ಈ ಹಿಂದೆ ಕೇಂದ್ರ ಸರ್ಕಾರ ನಡೆಸಿದ ನೇಕಾರರ ಜನಗಣತಿಯಲ್ಲಿ ಸಹಕರಿಸಿದ ನೇಕಾರರ ಖಾತೆಗೆ ಸರ್ಕಾರದಿಂದ 5 ಸಾವಿರ ರೂಪಾಯಿ ಹಣ ಜಮೆಯಾಗಿದೆ ಎಂದು ಹೇಳಿದರು.