ದೇವನಹಳ್ಳಿ : ಜನವರಿ 15 ರಂದು ಸ್ಟಾರ್ ಏಷ್ಯಾ ಸಂಸ್ಥೆಯ ವಿಮಾನ ಬೆಂಗಳೂರಿನಿಂದ ಕಲಬುರಗಿಗೆ ಟೇಕ್ ಆಫ್ ಆಗುವ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಸಾರ್ವಜನಿಕ ಸೇವೆಗೆ ತೆರೆದುಕೊಳ್ಳಲಿದೆ. ಜ.15ರ ಭಾನುವಾರ ಬೆಳಗ್ಗೆ 8:40ಕ್ಕೆ ಟರ್ಮಿನಲ್ -2 ನಲ್ಲಿ ಬೆಂಗಳೂರಿನಿಂದ ಕಲಬುರಗಿಗೆ ಪ್ರಯಾಣಿಸುವ ಸ್ಟಾರ್ ಏಷ್ಯಾ ವಿಮಾನ ಟೇಕ್ ಆಫ್ ಆಗಲಿದೆ. ಇದು ಟರ್ಮಿನಲ್ 2 ನಿಂದ ಟೇಕ್ ಆಫ್ ಆಗುವ ಮೊದಲ ವಿಮಾನವಾಗಿರಲಿದೆ.
ಇನ್ನು ಶೀಘ್ರದಲ್ಲೇ ಏರ್ ಏಷ್ಯಾ, ಏರ್ ಇಂಡಿಯಾ, ವಿಸ್ತಾರ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಟರ್ಮಿನಲ್ -2 ನಿಂದ ತಮ್ಮ ಸೇವೆ ಆರಂಭಿಸಲಿವೆ. ಪ್ರಾರಂಭದಲ್ಲಿ ಟರ್ಮಿನಲ್ -2 ದೇಶಿಯ ವಿಮಾನಗಳ ಹಾರಾಟಕ್ಕೆ ಮಾತ್ರ ಸೀಮಿತವಾಗಿರಲಿದೆ.
ಪ್ರಧಾನಿಯಿಂದ ಉದ್ಘಾಟನೆಗೊಂಡಿದ್ದ ಟರ್ಮಿನಲ್ : ಕಳೆದ ವರ್ಷ ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿಯವರು ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ -2 ಅನ್ನು ಉದ್ಘಾಟನೆಗೊಳಿಸಿದ್ದರು. ಈ ಟರ್ಮಿನಲ್ ಅನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಅಲ್ಲದೇ ಪ್ರಯಾಣಿಕರ ಮನ ತಣಿಸಲು ಟರ್ಮಿನಲ್ ಅನ್ನು ಉದ್ಯಾನದಂತೆ ಸಿಂಗಾರಗೊಳಿಸಲಾಗಿದೆ. ಈ ಉದ್ಯಾನವನ ಜಲಪಾತ, ವಿವಿಧ ಕಲೆಗಳನ್ನು ಪ್ರತಿನಿಧಿಸುವ ಕಲಾಕೃತಿಗಳನ್ನು ಒಳಗೊಂಡಿದೆ.
ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಉತ್ಕೃಷ್ಟವಾಗಿ ಟರ್ಮಿನಲ್ 2 ನಿರ್ಮಾಣ ಮಾಡಲಾಗಿದೆ. ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಎರಡನೇ ಅತಿ ದೊಡ್ಡ ವಿಮಾನ ನಿಲ್ದಾಣ ಕೆಐಎಎಲ್ ಆಗಿದೆ. ಸದ್ಯ ಟರ್ಮಿನಲ್ -1 ರಲ್ಲಿ ವಾರ್ಷಿಕವಾಗಿ 1.6 ಕೋಟಿ ಪ್ರಯಾಣಿಕರು ಬಂದು ಹೋಗುತ್ತಾರೆ. ಇಲ್ಲಿನ ಪ್ರಯಾಣಿಕರ ದಟ್ಟಣೆಯ ಕಾರಣದಿಂದಾಗಿ ಎರಡನೇ ಟರ್ಮಿನಲ್ ನಿರ್ಮಾಣ ಮಾಡಲಾಗಿತ್ತು. ಇದು ವರ್ಷಕ್ಕೆ 2 ಕೋಟಿಗೂ ಅಧಿಕ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಟರ್ಮಿನಲ್-2 ನ್ನು ಗಾರ್ಡನ್, ಸುಸ್ಥಿರತೆ, ತಂತ್ರಜ್ಞಾನ, ಕಲೆ ಮತ್ತು ಸಂಸ್ಕೃತಿ ಎಂಬ ನಾಲ್ಕು ಆಧಾರಸ್ತಂಭಗಳ ಮೇಲೆ ವಿನ್ಯಾಸಗೊಳಿಸಲಾಗಿದೆ.
ಟರ್ಮಿನಲ್ ಒಳಗೆ ಕಣ್ಮನ ಸೆಳೆಯುವ ಉದ್ಯಾನ: ಬೆಂಗಳೂರು ನಗರವನ್ನು ನಾವು ಗಾರ್ಡನ್ ಸಿಟಿ ಎಂದು ಕರೆಯುತ್ತೇವೆ. ಈ ಪರಿಕಲ್ಪನೆಯಡಿ ಟರ್ಮಿನಲ್ -2 ನಲ್ಲಿ ಸಸ್ಯರಾಶಿಯನ್ನು ಸೃಷ್ಟಿ ಮಾಡಲಾಗಿದೆ. ಇಲ್ಲಿ ಅಳಿವಿನಂಚಿನಲ್ಲಿರುವ 180 ಜಾತಿಯ ಸಸ್ಯಗಳು, ನೂರಾರು ವರ್ಷ ಹಳೆಯ ಮರಗಳು, 620 ಸ್ಥಳೀಯ ಸಸಿಗಳು, 150 ಪಾಮ್ ಜಾತಿಯ ಸಸ್ಯಗಳು, 7700 ಕಸಿ ಮಾಡಿದ ಮರಗಳು, 96 ಕಮಲ, 100 ಲಿಲ್ಲಿ ಜಾತಿಯ ಸಸ್ಯಗಳನ್ನು ಪೋಷಿಸಲಾಗಿದೆ. ಜೊತೆಗೆ ಸಣ್ಣ ಜಲಪಾತವನ್ನು ನಿರ್ಮಾಣ ಮಾಡಲಾಗಿದೆ.
ಬಿದಿರಿನ ಅರಮನೆ :ಟರ್ಮಿನಲ್ ಒಳಗಿನ ಛಾವಣಿ, ಮೆಟ್ಟಿಲು, ಕಂಬ ಮತ್ತು ರೇಲಿಂಗ್ ನಲ್ಲಿ ಬಿದಿರು ಬಳಕೆ ಮಾಡಲಾಗಿದೆ. ಒಟ್ಟು ಈ ಬಿದಿರಿನ ವಿನ್ಯಾಸಗಳಿಗೆ ಸುಮಾರು 923 ಕಿ.ಮೀ ನಷ್ಟು ಉದ್ದದ ಬಿದಿರು ಬಳಕೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಇಂಜಿನಿಯರ್ಸ್ ಬಿದಿರು ಬಳಕೆ ಮಾಡಿ ಇಂಟೀರಿಯರ್ ವಿನ್ಯಾಸಗೊಳಿಸಿದ್ದಾರೆ. ಈ ಬಿದಿರು ಅಗ್ನಿ ನಿರೋಧಕ ಮತ್ತು ದೀರ್ಘಕಾಲ ಬಾಳಿಕೆಯನ್ನು ಹೊಂದಿದೆ.
ಸೂರ್ಯನ ಬೆಳಕು ನೇರ ಒಳ ಪ್ರವೇಶಿಸುವ ವಿನ್ಯಾಸ : ಇನ್ನು ಈ ಟರ್ಮಿನಲ್ ನಲ್ಲಿ ನೈಸರ್ಗಿಕವಾದ ಸೂರ್ಯನ ಬೆಳಕನ್ನು ಲೈಟಿಂಗ್ ನಂತೆ ಪರಿವರ್ತಿಸಲಾಗಿದೆ. ಇಲ್ಲಿ ಸೌರಫಲಕಗಳನ್ನು ಅಳವಡಿಸಲಾಗಿದ್ದು, ಸೌರ ಫಲಕಗಳು ಮತ್ತು ಸ್ಕೈ ಲೈಟಿಂಗ್ ನಿಂದ ಶೇಕಡಾ 24.9 ರಷ್ಟು ವಿದ್ಯುತ್ ಉಳಿತಾಯವಾಗುತ್ತದೆ. ಇಲ್ಲಿ ಪ್ರಯಾಣಿಕರ ಮುಖವೇ ಬಯೋ ಮೆಟ್ರಿಕ್ ಟೋಕನ್ ನಂತೆ ಕಾರ್ಯ ನಿರ್ವಹಿಸುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇಲ್ಲಿ ಕೇವಲ 5 ನಿಮಿಷದಲ್ಲಿ ಭದ್ರತಾ ತಪಾಸಣೆ, ಸ್ಕ್ರೀನಿಂಗ್, ಬೋರ್ಡಿಂಗ್ ಪಾಸ್ ಲಭ್ಯವಾಗಲಿದೆ. ಇದರಿಂದ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಿ ಪ್ರಯಾಣ ಸುಖಕರವಾಗಲಿದೆ.
ಗ್ರೀನ್ ಏರ್ ಪೋರ್ಟ್ ಪರಿಕಲ್ಪನೆ: ಏರ್ ಪೋರ್ಟ್ ಒಳಗೆ ಮೆಟ್ಟಿಲುಗಳನ್ನು ಇಳಿಯಲು ಮತ್ತು ಹತ್ತಲು ಸಹಾಯವಾಗಲು ಬಿದಿರು ಬಳಕೆ ಮಾಡಲಾಗಿದೆ. ಛಾವಣಿ, ಮೆಟ್ಟಿಲು, ಕಂಬ, ರೇಲಿಂಗ್‌ಗಳಲ್ಲಿ ವ್ಯಾಪಕವಾಗಿ ಬಿದಿರು ಬಳಕೆ ಮಾಡಲಾಗಿದೆ. ಈ ಬಿದಿರು ಪರಿಸರಸ್ನೇಹಿ ಮತ್ತು ಇಂಗಾಲ ರಹಿತವಾಗಿದ್ದು, ಗ್ರೀನ್ ಏರ್ ಪೋರ್ಟ್ ಪರಿಕಲ್ಪನೆಗೆ ಪೂರಕವಾಗಿದೆ.
ಇದನ್ನೂ ಓದಿ :ಉದ್ಯಾನದ ಸೊಬಗು : ಕರ್ನಾಟಕ ಕಲಾ ಸಂಸ್ಕೃತಿಯ ಜೊತೆ ತಂತ್ರಜ್ಞಾನದ ಸಮ್ಮಿಲನ ಟರ್ಮಿನಲ್ 2