ಕರ್ನಾಟಕ

karnataka

ETV Bharat / state

ದೊಡ್ಡಬಳ್ಳಾಪುರ: ಆಸ್ಪತ್ರೆಯಲ್ಲಿ 10 ತಿಂಗಳ ಹಸುಗೂಸು ಸಾವು; ವೈದ್ಯರ ನಿರ್ಲಕ್ಷ್ಯ- ಪೋಷಕರ ಆರೋಪ - ಈಟಿವಿ ಭಾರತ ಕನ್ನಡ

ಆಸ್ಪತ್ರೆಗೆ ದಾಖಲಾಗಿದ್ದ ಹಸುಗೂಸು ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಘಟನೆ ನಡೆದಿದೆ.

ಹತ್ತು ತಿಂಗಳ ಹಸುಗೂಸು ಸಾವು
ಹತ್ತು ತಿಂಗಳ ಹಸುಗೂಸು ಸಾವು

By

Published : Aug 16, 2023, 10:30 PM IST

ಆಸ್ಪತ್ರೆಯಲ್ಲಿ ಹಸುಗೂಸು ಸಾವು ಪ್ರಕರಣ

ದೊಡ್ಡಬಳ್ಳಾಪುರ : ವೈದ್ಯರ ನಿರ್ಲಕ್ಷ್ಯದಿಂದ 10 ತಿಂಗಳ ಹಸುಗೂಸು ಮೃತಪಟ್ಟಿದೆ ಎಂದು ಆರೋಪಿಸಿ ಆಸ್ಪತ್ರೆಯ ಮುಂದೆ ಮೃತಮಗುವಿನ ಪೋಷಕರು ಅಕ್ರೋಶ ವ್ಯಕ್ತಪಡಿಸಿದ ಘಟನೆ ನಗರದ ಜನತಾ ನರ್ಸಿಂಗ್ ಹೋಮ್​ನಲ್ಲಿ ಇಂದು ನಡೆಯಿತು. ಪೋಷಕರ ಆರೋಪ ತಳ್ಳಿಹಾಕಿರುವ ವೈದ್ಯರು, ನಿರ್ಜಲೀಕರಣದಿಂದ ಮಗು ಸಾವನ್ನಪ್ಪಿದೆ ಎಂದು ಹೇಳಿದ್ದಾರೆ.

ಯಲಹಂಕದ ಕೋಗಿಲು ನಿವಾಸಿಗಳಾದ ವಿನೋದ್ ಮತ್ತು ಪ್ರಿಯಾಂಕ ದಂಪತಿಯ ಗಂಡು ಮಗು ಸಾವನ್ನಪ್ಪಿದೆ. ಕಳೆದ ಮೂರು ದಿನಗಳ ಹಿಂದೆ ಪ್ರಿಯಾಂಕ ತವರು ಮನೆ ಇರುವ ದೊಡ್ಡಬಳ್ಳಾಪುರ ತಾಲ್ಲೂಕಿನ ದರ್ಗಾಜೋಗಹಳ್ಳಿಗೆ ಬಂದಿದ್ದರು. ಈ ವೇಳೆ ಮಗು ಬೇಧಿಯಿಂದ ಬಳಲುತ್ತಿತ್ತು. ಆಗಸ್ಟ್ 13ರಂದು ಚಿಕಿತ್ಸೆಗಾಗಿ ದೊಡ್ಡಬಳ್ಳಾಪುರ ನಗರದ ಜನತಾ ನರ್ಸಿಂಗ್ ಹೋಮ್‌ಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಮಗು ಇಂದು ಸಾವನ್ನಪ್ಪಿದೆ. ಚಿಕಿತ್ಸೆ ನೀಡಿದ ವೈದ್ಯರೇ ಮಗುವಿನ ಸಾವಿಗೆ ಕಾರಣ ಎಂದು ಪೋಷಕರು ದೂರಿದ್ದಾರೆ.

ಮಗುವಿನ ತಂದೆ ವಿನೋದ್ ಮಾತನಾಡಿ, "ಮಗುವನ್ನು ದಾಖಲು ಮಾಡಿಕೊಂಡಾಗಿನಿಂದಲೂ ನರ್ಸಿಂಗ್ ಹೋಮ್ ಸಿಬ್ಬಂದಿ ಒಟ್ಟು 11 ಗ್ಲುಕೋಸ್ ಡ್ರಿಪ್ಸ್ ಹಾಕಿದ್ದಾರೆ. ಮಂಗಳವಾರ ರಾತ್ರಿ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರಾಯಿತು. ಕನ್ನಡ ಬಾರದ ಉತ್ತರ ಭಾರತೀಯ ವೈದ್ಯರೊಬ್ಬರು ಕುಡಿದು ಮಲಗಿದ್ದರು. ಅವರನ್ನು ಎಬ್ಬಿಸಲು ಪ್ರಯತ್ನಪಟ್ಟೆವು, ಅವರು ನಮಗೆ ಸರಿಯಾಗಿ ಸ್ಪಂದಿಸಲಿಲ್ಲ".

"ಇಂದು ಬೆಳಿಗ್ಗೆ 5.30ರ ಸುಮಾರಿಗೆ ನರ್ಸಿಂಗ್ ಹೋಮ್ ಸಿಬ್ಬಂದಿ ಮಗುವನ್ನು ಡಿ-ಕ್ರಾಸ್ ಸಮೀಪದ ಮತ್ತೊಂದು ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ತಿಳಿಸಿದರು. ಅಲ್ಲಿ ಮಗು ನಿತ್ರಾಣಗೊಂಡಿದ್ದು ಇಲ್ಲಿ ಚಿಕಿತ್ಸೆ ಕೊಡಿಸಲು ಸಾಧ್ಯವಿಲ್ಲ, ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಫತ್ರೆಗೆ ಕರೆದುಕೊಂಡು ಹೋಗಿ ಎಂದಿದ್ದಾರೆ. ಅಲ್ಲಿಂದ ಮಣಿಪಾಲ್‌ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿ ವೈದ್ಯರು ಮಗುವನ್ನು ಪರೀಕ್ಷಿಸಿ ಮಗು ಮೃತಪಟ್ಟಿರುವುದಾಗಿ ತಿಳಿಸಿದರು. ವೈದ್ಯರ ನಿರ್ಲಕ್ಷ್ಯದಿಂದ ನಮ್ಮ ಮಗುವಿನ ಪ್ರಾಣ ಹೋಯಿತು" ಎಂದರು.

'ನಿರ್ಜಲೀಕರಣದಿಂದ ಮಗು ಸಾವು'- ವೈದ್ಯರ ಹೇಳಿಕೆ:ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚಿಕಿತ್ಸೆ ನೀಡಿದ ವೈದ್ಯ ಬಸವರಾಜ್ ನಾಯ್ಕ್ , "ನಮಗೆ ಪೋಷಕರು ಹಳೆಯ ಪರಿಚಯ. ಆಗಾಗ್ಗೆ ಆಸ್ಪತ್ರೆಗೆ ಬರುತ್ತಿದ್ದರು. ಎಂದಿನಂತೆ ಆಗಸ್ಟ್ 13ರಂದು ಮಗುವಿಗೆ ಬೇಧಿಯಾಗುತ್ತಿದೆ ಎಂದು ಕರೆತಂದಿದ್ದಾರೆ. ಮಗುವಿಗೆ ಆಹಾರ ಸೇರುತ್ತಿರಲಿಲ್ಲ, ಅತಿಯಾದ ಭೇದಿಯಿಂದಾಗಿ ನಿತ್ರಾಣಗೊಂಡಿತ್ತು. ನಿರ್ಜಲೀಕರಣದಿಂದ ಬಳಲಿತ್ತು. ಡ್ರಿಪ್ಸ್ ಹಾಕಲು ನರವೂ ಸಿಗಲಿಲ್ಲ. ನಮ್ಮ ಸಿಬ್ಬಂದಿ ಕಷ್ಟಪಟ್ಟು ಡ್ರಿಪ್ಸ್ ಹಾಕಿದ್ದಾರೆ. ಮಗುವಿನ ಚಿಕಿತ್ಸೆಗೆ ಬೇಕಾದ ಸೌಲಭ್ಯಗಳು ಲಭ್ಯವಿರಲಿಲ್ಲ. ಹಾಗಾಗಿ ಬೇರಡೆ ಚಿಕಿತ್ಸೆ ಕೊಡಿಸಿ ಎಂದು ಹೇಳಿದ್ದೆ. ನನ್ನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳದೇ ಈ ಹಿಂದೆ ನೀವೇ ಚಿಕಿತ್ಸೆ ನೀಡಿದ್ದೀರಿ, ಈಗಲೂ ನೀವೇ ಚಿಕಿತ್ಸೆ ನೀಡಿ ಎಂದರು. ಮಗುವಿನ ಸಾವಿಗೆ ನಿರ್ಜಲೀಕರಣವೇ ಕಾರಣ ಹೊರತು ನಮ್ಮ ನಿರ್ಲಕ್ಷ್ಯವಲ್ಲ" ಎಂದರು. ದೊಡ್ಡಬಳ್ಳಾಪುರ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ನಿಯಂತ್ರಿಸಿದರು.

ಇದನ್ನೂ ಓದಿ:ಚಿಕ್ಕೋಡಿ: ನಿರ್ಲಕ್ಷ್ಯದಿಂದ ಬಾಣಂತಿ ಸಾವು ಸಂಭವಿಸಿದೆ ಎಂದು ಆರೋಪಿಸಿ ಕುಟುಂಬಸ್ಥರ ಪ್ರತಿಭಟನೆ

ABOUT THE AUTHOR

...view details