ದೊಡ್ಡಬಳ್ಳಾಪುರ ( ಬೆಂಗಳೂರು ಗ್ರಾ.): ದುಷ್ಕರ್ಮಿಗಳು ಎರಡು ದೇವಸ್ಥಾನಗಳ ಹುಂಡಿ ಹಣ ಮತ್ತು ದೇವರ ಚಿನ್ನದ ತಾಳಿಯನ್ನು ಕದ್ದೊಯ್ದಿದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ವೀರಾಪುರ ಗ್ರಾಮದಲ್ಲಿ ನಡೆದಿದೆ. ಮಾರಮ್ಮ ಹಾಗೂ ಆಂಜನೇಯ ದೇವಸ್ಥಾನದಲ್ಲಿ ಕಳವು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕಳ್ಳರು ಹುಂಡಿಯಲ್ಲಿದ್ದ ಸುಮಾರು 50 ಸಾವಿರ ರೂ ಹಣವನ್ನು ಕದ್ದೊಯ್ದಿದ್ದಾರೆ ಎಂದು ಹೇಳಲಾಗಿದೆ. ಆದರೆ 3,600 ರೂ ಚಿಲ್ಲರೆ ಹಣವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಕಳೆದ ಭಾನುವಾರ ರಾತ್ರಿ 2 ಗಂಟೆ ಸುಮಾರಿಗೆ ಕಳ್ಳರು ಮಾರಮ್ಮ ದೇವಸ್ಥಾನದ ಬೀಗ ಮುರಿದು ಒಳ ನುಗ್ಗಿದ್ದಾರೆ. ದೇವರ ಕೊರಳಿನಲ್ಲಿದ್ದ 8 ಚಿನ್ನದ ತಾಳಿಗಳು, ಬೆಳ್ಳಿ ಆಭರಣಗಳು ಹಾಗೂ ಹುಂಡಿಯಲ್ಲಿದ್ದ ಹಣವನ್ನು ದೋಚಿದ್ದಾರೆ. ಮರುದಿನ ಸಂಜೆ ದೇವಸ್ಥಾನದ ಪೂಜಾರಿ ದೇವಸ್ಥಾನ ಸ್ವಚ್ಛಗೊಳಿಸಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ 5 ವರ್ಷಗಳಿಂದ ಹುಂಡಿ ಹಣ ತೆಗೆದಿರಲಿಲ್ಲ, ಸುಮಾರು 50 ಸಾವಿರಕ್ಕೂ ಹೆಚ್ಚು ಹಣ ಸಂಗ್ರಹವಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮಾರಮ್ಮ ದೇವಸ್ಥಾನದಲ್ಲಿ ಕಳವು ಮಾಡಿದ ನಂತರ ಹಿಂಭಾಗದಲ್ಲಿರುವ ಆಂಜನೇಯ ದೇವಸ್ಥಾನದ ಹುಂಡಿಗೂ ಕನ್ನ ಹಾಕಿದ್ದಾರೆ. ಬಳಿಕ ಹುಂಡಿಯನ್ನು ಗ್ರಾಮದ ಹೊರಗಿನ ನೀಲಗಿರಿ ತೋಪಿನಲ್ಲಿ ಎಸೆದು ಕಾಲ್ಕಿತ್ತಿದ್ದಾರೆ.