ನೆಲಮಂಗಲ:ತ್ಯಾಮಗೊಂಡ್ಲು ಗ್ರಾಮ ಪಂಚಾಯತ್ಅನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿಸಬೇಕೆಂದು ಪಟ್ಟು ಹಿಡಿದಿರುವ ಗ್ರಾಮಸ್ಥರು, ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಗ್ರಾಮದಿಂದ ಯಾರೂ ನಾಮಪತ್ರ ಸಲ್ಲಿಸದೆ ಚುನಾವಣೆಗೆ ಬಹಿಷ್ಕಾರ ಹಾಕಿ ಸರ್ಕಾರಕ್ಕೆ ತಮ್ಮ ಬೇಡಿಕೆ ಸಲ್ಲಿಸಿದ್ದಾರೆ.
ತಾಲೂಕಿನ ಪ್ರಮುಖ ದಾಬಸ್ ಪೇಟೆ ಕೈಗಾರಿಕಾ ಪ್ರದೇಶದ ಸಮೀಪವೇ ಇರುವ ತ್ಯಾಮಗೊಂಡ್ಲು ದಿನೇ ದಿನೆ ಬೆಳೆಯುತ್ತಿದೆ. ಪಟ್ಟಣ ಪಂಚಾಯತ್ ಆಗುವ ಎಲ್ಲಾ ಅರ್ಹತೆ ಈ ಪಟ್ಟಣಕ್ಕೆ ಇದೆ. ಹೀಗಿದ್ದರೂ ಇಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆ ಮಾಡಲಾಗಿದೆ. ಹೀಗಾಗಿ ಗ್ರಾಮಸ್ಥರು ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸದೆ ಬಹಿಷ್ಕರಿಸಿದ್ದಾರೆ. ಇಲ್ಲಿನ ಗ್ರಾಮ ಪಂಚಾಯತ್ನಲ್ಲಿ 21 ಸ್ಥಾನಗಳಿದ್ದು, ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಯಾರೂ ನಾಮಪತ್ರ ಸಲ್ಲಿಸದೆ ಪಟ್ಟಣ ಪಂಚಾಯತ್ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.