ದೊಡ್ಡಬಳ್ಳಾಪುರ (ಬೆಂ.ಗ್ರಾ): ಟೋಲ್ಗಳಲ್ಲಿ ಸಾಧು-ಸಂತರ, ಸನ್ಯಾಸಿಗಳ, ಮಠಾಧೀಶರ ವಾಹನಗಳಿಗೆ ನಿಶುಲ್ಕ(ಉಚಿತ) ಪ್ರವೇಶ ಕಲ್ಪಿಸುವಂತೆ ಆಗ್ರಹಿಸಿ ಬೆಂಗಳೂರಿನ ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ. ಆರೂಢಭಾರತೀ ಸ್ವಾಮೀಜಿ ದಿಗಂಬರರಾಗಿ ಪ್ರತಿಭಟನೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನಿಂದ ಗೌರಿಬಿದನೂರಿಗೆ ಪ್ರಯಾಣಿಸಿದ ಸ್ವಾಮೀಜಿಯವರ ವಾಹನಕ್ಕೆ ತಿಪ್ಪಗಾನಹಳ್ಳಿ ಟೋಲ್ನಲ್ಲಿ ನಿಶುಲ್ಕ ಪ್ರವೇಶಕ್ಕೆ ತಡೆಯೊಡ್ಡಲಾಗಿದೆ. ಈ ವೇಳೆ ಸ್ವಾಮೀಜಿ ಕಾರಿಂದ ಇಳಿದು ದಿಢೀರ್ ವಿವಸ್ತ್ರರಾಗಿ ರಸ್ತೆಯಲ್ಲೇ ಧ್ಯಾನಕ್ಕೆ ಕುಳಿತರು.
ಟೋಲ್ಗಳಲ್ಲಿ ನಿಶುಲ್ಕಕ್ಕೆ ಆಗ್ರಹಿಸಿ ವಿವಸ್ತ್ರರಾದ ಸ್ವಾಮೀಜಿ ಸ್ಥಳಕ್ಕೆ ಧಾವಿಸಿದ ಟೋಲ್ ಅಧಿಕಾರಿ ಸ್ವಾಮೀಜಿ ವಾಹನಕ್ಕೆ ನಿಶುಲ್ಕ ಪ್ರವೇಶ ನೀಡಿ, ಪ್ರಯಾಣ ಮುಂದುವರೆಸಲು ಕೋರಿದಾಗ ಸ್ವಾಮೀಜಿ ಪ್ರತಿಭಟನೆ ನಿಲ್ಲಿಸಿ ಮುಂದಕ್ಕೆ ಪ್ರಯಾಣಿಸಿದರು. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಸ್ವಾಮೀಜಿ, ‘ದೇಶ ಹಾಗೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದ್ದು, ಹಿಂದೂ ರಾಷ್ಟ್ರದ ಪರಿಕಲ್ಪನೆ ಇರುವಾಗ, ನರೇಂದ್ರ ಮೋದಿಯವರು ಪ್ರಧಾನಿಯಾಗಿರುವಾಗ ಸನ್ಯಾಸಿಯೊಬ್ಬರು ಹೀಗೆ ಪ್ರತಿಭಟಿಸುವಂಥ ಸನ್ನಿವೇಶ ಉಂಟಾದದ್ದು ದುರಾದೃಷ್ಟಕರ ಎಂದರು.
ಕೇಂದ್ರ ಸರ್ಕಾರದ ಸಾರಿಗೆ ಮತ್ತು ರಸ್ತೆ ಹೆದ್ದಾರಿ ಪ್ರಾಧಿಕಾರವು 34 ವಾಹನಗಳಿಗೆ ಟೋಲ್ ಗಳಲ್ಲಿ ನಿಶುಲ್ಕ ಪ್ರವೇಶಕ್ಕೆ ಅನುಮತಿ ನೀಡಿದೆ. ಈ ಪಟ್ಟಿಯನ್ನು ಪರಿಷ್ಕರಿಸಿ ಸಾಧು-ಸಂತ, ಮಠಾಧೀಶರ ವಾಹನಗಳಿಗೂ ನಿಶುಲ್ಕ ಪ್ರವೇಶಕ್ಕೆ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.
ಈ ಮುಂಚೆಯೂ ಸಹ ಇದೇ ಸ್ವಾಮೀಜಿಯವರು ವಿಜಯಪುರದಿಂದ ಬೆಂಗಳೂರಿಗೆ ಪ್ರಯಾಣಿಸಿದಾಗ 3 ಕಡೆ ಟೋಲ್ಗಳಲ್ಲಿ ವಾಹನವನ್ನು ತಡೆದಾಗಲು ವಿವಸ್ತ್ರರಾಗಿ ರಸ್ತೆಯಲ್ಲಿ ಧ್ಯಾನಕ್ಕೆ ಕುಳಿತು ಪ್ರತಿಭಟಿಸಿದ್ದರು.