ಕರ್ನಾಟಕ

karnataka

ETV Bharat / state

ತ್ಯಾಜ್ಯ ನಿರ್ವಹಣೆಯಲ್ಲಿ ದೊಡ್ಡಬಳ್ಳಾಪುರ ನಗರಸಭೆ ಸಾಧನೆ : ಸ್ವಚ್ಛ ನಗರಗಳ ಪಟ್ಟಿಯಲ್ಲಿ 4ನೇ ಸ್ಥಾನ - ದೊಡ್ಡಬಳ್ಳಾಪುರ ನಗರಸಭೆ ಸಾಧನೆ

ವಾರ್ಡ್‌ಗಳಿಂದ ಸಂಗ್ರಹಿಸಿದ ಕಸವನ್ನು ನಗರದ ಹೊರವಲಯದ ವಡ್ಡರಪಾಳ್ಳಯದಲ್ಲಿ 15 ಎಕರೆ ವಿಸ್ತೀರ್ಣದ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತಂದು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ. 15 ಟನ್​​​ಗಳಷ್ಟು ಸಂಗ್ರಹವಾಗುವ ಹಸಿ ಕಸವನ್ನು 40 ದಿನಗಳವರೆಗೂ ಕೊಳೆಸುವ ಮೂಲಕ ಸಾವಯವ ಗೊಬ್ಬರ ಮಾಡಲಾಗುವುದು..

ದೊಡ್ಡಬಳ್ಳಾಪುರ ನಗರಸಭೆ ಸಾಧನೆ
ದೊಡ್ಡಬಳ್ಳಾಪುರ ನಗರಸಭೆ ಸಾಧನೆ

By

Published : Jan 15, 2022, 7:50 PM IST

ದೊಡ್ಡಬಳ್ಳಾಪುರ: ವೈಜ್ಞಾನಿಕವಾಗಿ ಘನ ತ್ಯಾಜ್ಯ ನಿರ್ವಹಣೆ ಮಾಡುವಲ್ಲಿ ದೊಡ್ಡಬಳ್ಳಾಪುರ ನಗರಸಭೆ ಉತ್ತಮ ಸಾಧನೆ ಮಾಡಿದೆ. ಪ್ರತಿ ದಿನ 35 ಟನ್ ಘನ ತ್ಯಾಜ್ಯವನ್ನು ಸಂಗ್ರಹಿಸುವ ನಗರಸಭೆ, ಕಸವನ್ನ ಗೊಬ್ಬರವಾಗಿ ಮಾಡಿ ಆದಾಯಗಳಿಸುತ್ತಿದೆ. ಇದರೊಂದಿಗೆ ಸ್ವಚ್ಛ ನಗರಗಳ ಪಟ್ಟಿಯಲ್ಲಿ ರಾಜ್ಯಕ್ಕೆ ದೊಡ್ಡಬಳ್ಳಾಪುರ ನಗರ ಸಭೆಗೆ 4ನೇ ಸ್ಥಾನ ಸಿಕ್ಕಿದೆ.

ದೊಡ್ಡಬಳ್ಳಾಪುರ ನಗರಸಭೆ ಸಾಧನೆ

ನಗರ ಬೆಳೆದಂತೆ ನಗರದಲ್ಲಿ ಉತ್ಪತಿಯಾಗುವ ಕಸದ ಪ್ರಮಾಣವು ಹೆಚ್ಚಾಗುತ್ತಿದೆ. ಸೂಕ್ತ ರೀತಿಯಲ್ಲಿ ಕಸವನ್ನ ವಿಲೇವಾರಿ ಮಾಡುವುದು ಸ್ಥಳೀಯ ಸಂಸ್ಥೆಗಳಿಗೆ ದೊಡ್ಡ ತಲೆನೋವು. ದೊಡ್ಡಬಳ್ಳಾಪುರ ನಗರಸಭೆ ಕಸ ವಿಲೇವಾರಿಯಲ್ಲಿ ಉತ್ತಮ ಸಾಧನೆ ಮಾಡಿದೆ. ಭಾರತ ಸರ್ಕಾರದ ಸ್ವಚ್ಛ ಸರ್ವೇಕ್ಷಣಾ ನಡೆಸುವ ಸ್ವಚ್ಛತಾ ನಗರಗಳ ಪಟ್ಟಿಯಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಮತ್ತು ದಕ್ಷಿಣ ಭಾರತದ ವಲಯದಲ್ಲಿ 43ನೇ ಸ್ಥಾನ ಪಡೆದಿದೆ.

ದೊಡ್ಡಬಳ್ಳಾಪುರ ನಗರಸಭೆಯಲ್ಲಿ 1ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಪ್ರತಿದಿನ 35 ಟನ್ ಕಸ ಉತ್ಪತ್ತಿಯಾಗುತ್ತೆ. 31ವಾರ್ಡ್‌ಗಳಿಂದ ಕಸ ಸಂಗ್ರಹಿಸಲು 100ಕ್ಕೂ ಹೆಚ್ಚು ಸಿಬ್ಬಂದಿ ಮತ್ತು 25 ವಾಹನಗಳ ನಿಯೋಜನೆ ಮಾಡಲಾಗಿದೆ. ಪ್ರತಿ ಮನೆಯಿಂದ ಹಸಿ ಕಸ ಮತ್ತು ಒಣ ಕಸವನ್ನ ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತದೆ.

ವಾರ್ಡ್‌ಗಳಿಂದ ಸಂಗ್ರಹಿಸಿದ ಕಸವನ್ನು ನಗರದ ಹೊರವಲಯದ ವಡ್ಡರಪಾಳ್ಳಯದಲ್ಲಿ 15 ಎಕರೆ ವಿಸ್ತೀರ್ಣದ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತಂದು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ. 15 ಟನ್​​​ಗಳಷ್ಟು ಸಂಗ್ರಹವಾಗುವ ಹಸಿ ಕಸವನ್ನು 40 ದಿನಗಳವರೆಗೂ ಕೊಳೆಸುವ ಮೂಲಕ ಸಾವಯವ ಗೊಬ್ಬರ ಮಾಡಲಾಗುವುದು.

10 ಟನ್ ಒಣ ಕಸದಲ್ಲಿನ 5 ಟನ್ ಪ್ಲಾಸ್ಟಿಕ್ ಮತ್ತು 5 ಟನ್ ಮರುಬಳಕೆಗೆ ಬಾರದ ವಸ್ತುಗಳು ಸಂಗ್ರಹವಾಗುತ್ತೆ. ಪ್ಲಾಸ್ಟಿಕ್ ವಸ್ತುಗಳನ್ನು ಹರಾಜಿನ ಮೂಲಕ ಆದಾಯ ಗಳಿಸಲಾಗುತ್ತದೆ. ಮತ್ತು ಮರುಬಳಕೆಗೆ ಬಾರದ ವಸ್ತುಗಳನ್ನು ವೈಜ್ಞಾನಿಕ ವಿಧಾನದಲ್ಲಿ ಸುಟ್ಟು ವಿಲೇವಾರಿ ಮಾಡಲಾಗುತ್ತಿದೆ. ಕಸದಿಂದ ರಸ ತೆಗೆಯುವಂತೆ ದೊಡ್ಡಬಳ್ಳಾಪುರ ನಗರಸಭೆಯವರು ಕಸದಿಂದ ಕಾಂಪೋಸ್ಟ್ ಗೊಬ್ಬರ ಮತ್ತು ಎರೆಹುಳು ಗೊಬ್ಬರವನ್ನು ತಯಾರಿಸುತ್ತಿದ್ದಾರೆ.

ಒಂದು ಕೆಜಿ ಕಾಂಪೋಸ್ಟ್ ಗೊಬ್ಬರಕ್ಕೆ ಒಂದು ರೂಪಾಯಿ ಮತ್ತು ಎರೆಹುಳು ಗೊಬ್ಬರವನ್ನು 4 ರೂಪಾಯಿಗೆ ರೈತರಿಗೆ ಮಾರಾಟ ಮಾಡಲಾಗುತ್ತಿದೆ. ಈಗಾಗಲೇ 1,900 ಟನ್ ಗೊಬ್ಬರ ಮಾರಾಟದ ಮೂಲಕ ನಗರಸಭೆ ಆದಾಯಗಳಿಸಿದೆ. ನಗರವನ್ನು ಸ್ವಚ್ಛವಾಗಿಡಲು ಪಣತೊಟ್ಟಿರುವ ನಗರಸಭೆ ಅಧ್ಯಕ್ಷರು ಮತ್ತು ಸದಸ್ಯರು ಸ್ವಚ್ಛತಾ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ತರುವ ಪ್ರಯತ್ನದಲ್ಲಿದ್ದಾರೆ.

ABOUT THE AUTHOR

...view details