ದೊಡ್ಡಬಳ್ಳಾಪುರ :ಸ್ನೇಹಿತ ಉದ್ದಾರವಾಗಲೆಂದು ಸಾಲವಾಗಿ 4 ಲಕ್ಷ ರೂ. ಹಣ ಕೊಟ್ಟಿದ್ದ ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಹಣ ವಾಪಸ್ ಕೊಡುವುದಾಗಿ ಮನೆಗೆ ಕರೆಸಿಕೊಂಡ ಸ್ನೇಹಿತ, ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆಯ ವಿವರ:
ದೊಡ್ಡಬಳ್ಳಾಪುರ ನಗರದ ಚಿಕ್ಕಪೇಟೆಯ ನಿವಾಸಿ ಉಷಾರಾಣಿ (32) ಅನುಮಾನಾಸ್ಪದವಾಗಿ ಮೃತಪಟ್ಟಿರುವ ಮಹಿಳೆ. ಈಕೆ ಗಂಡನಿಂದ ದೂರವಾಗಿ ಮಗಳ ಜೊತೆ ತಾಯಿ ಮನೆಯಲ್ಲಿ ವಾಸವಿದ್ದಳು. ಈಕೆಯ ಕುಟುಂಬಕ್ಕೆ ಆಟೋ ಚಾಲಕ ಪವನ್ ಎಂಬಾತ ಪರಿಚಯವಾಗಿದ್ದ. ಉಷಾರಾಣಿಯ ಕುಟುಂಬದವರು ಎಲ್ಲಾದರು ಹೋಗುವುದಾದರೆ ಪವನ್ ಆಟೋದಲ್ಲಿ ಹೋಗುತ್ತಿದ್ದರು.
ಹೀಗಾಗಿ, ಪವನ್ ಉಷಾರಾಣಿಗೂ ಅಪ್ತನಾಗಿದ್ದ. ಇದೇ ಸಲುಗೆಯಲ್ಲಿ ಸ್ವಂತ ಆಟೋ ಖರೀದಿಸುತ್ತೇನೆಂದು ಹೇಳಿ, ಉಷಾರಾಣಿಯಿಂದ 4 ಲಕ್ಷ ರೂ. ಹಣವನ್ನು ಸಾಲವಾಗಿ ಪಡೆದಿದ್ದ. ಆದರೆ, ವರ್ಷಗಳೇ ಕಳೆದರೂ ಸಾಲದ ಹಣ ಮಾತ್ರ ವಾಪಸ್ ಕೊಟ್ಟಿರಲಿಲ್ಲ. ಹಣದ ವಿಚಾರಕ್ಕೆ ಪವನ್ ಮತ್ತು ಉಷಾರಾಣಿಯ ನಡುವೆ ಸಾಕಷ್ಟು ಬಾರಿ ಜಗಳವಾಗಿತ್ತು.
ಓದಿ: ನಾಲ್ವರು ಮಕ್ಕಳು, ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
ಗುರುವಾರ ರಾತ್ರಿ ಉಷಾರಾಣಿಗೆ ಫೋನ್ ಮಾಡಿದ್ದ ಪವನ್, ಹಣ ಕೊಡುವುದಾಗಿ ಹೇಳಿ ಮೆಳೇಕೋಟೆ ಕ್ರಾಸ್ಗೆ ಬರುವಂತೆ ಹೇಳಿದ್ದ. ರಾತ್ರಿ 9 ಗಂಟೆ ಸಮಯದಲ್ಲಿ ಉಷಾರಾಣಿ ತನ್ನ ತಮ್ಮನ ಜೊತೆ ಬೈಕ್ನಲ್ಲಿ ಮೆಳೇಕೋಟೆ ಕ್ರಾಸ್ಗೆ ಹೋಗಿದ್ದಳು. ಅಲ್ಲಿಂದ ಉಷಾರಾಣಿಯನ್ನು ಮಾತ್ರ ಕರೆದುಕೊಂಡು ಹೋದ ಪವನ್, ಹಣಕಾಸಿನ ವಿಚಾರಕ್ಕೆ ಜಗಳ ಮಾಡಿದ್ದಾನೆ. ಬಳಿಕ ಲೋ ಬಿಪಿಯಾಗಿ ಆಟೋದಲ್ಲೇ ಕುಸಿದು ಬಿದ್ದಳೆಂದು ದೊಡ್ಡಬಳ್ಳಾಪುರ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಆದರೆ, ಉಷಾರಾಣಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಹೊಡೆದು ಸಾಯಿಸಿದ್ನಾ ಪವನ್?
ಹಣ ವಾಪಸ್ ಕೊಡಬೇಕೆನ್ನುವ ಕಾರಣಕ್ಕೆ ಪವನ್ ಉಷಾರಾಣಿಯನ್ನ ಹೊಡೆದು ಸಾಯಿಸಿದ್ದಾನೆ. ನಂತರ, ಆಕೆ ಲೋ ಬಿಪಿಯಾಗಿ ಕುಸಿದು ಬಿದ್ದಿದ್ದಾಳೆ ಎಂದು ಆಸ್ಪತ್ರೆಗೆ ದಾಖಲಿಸಿ, ಕೊಲೆ ಪ್ರಕರಣದಿಂದ ಬಚಾವ್ ಆಗಲು ಯತ್ನಿಸಿದ್ದಾನೆ. ಆಸ್ಪತ್ರೆಗೆ ದಾಖಲು ಮಾಡುವಾಗ ಉಷಾರಾಣಿ ತನ್ನ ಹೆಂಡತಿ ಎಂದು ಹೇಳಿ ದಾಖಲು ಮಾಡಿದ್ದಾನೆ. ಮೃತದೇಹದ ಮೂಗು ಮತ್ತು ಬಾಯಿಂದ ರಕ್ತ ಸೋರುತ್ತಿತ್ತು ಎಂದು ಉಷಾರಾಣಿ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.
ಮೃತ ಮಹಿಳೆಯ ವಿಚ್ಚೇದನ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆಕೆಯ 14 ವರ್ಷದ ಮಗಳು ಒಂದು ಕಡೆ ತಂದೆಯಿಂದ ದೂರವಾಗಿ ಇದೀಗ ತಾಯಿಯನ್ನೂ ಕಳೆದುಕೊಂಡು ಅನಾಥೆಯಾಗಿದ್ದಳು. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪವನ್ನನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.