ಹೊಸಕೋಟೆ: ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜತೆ ನಡೆಯುವ ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ಆಯ್ಕೆಯಾಗಿರುವ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯೊಂದಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಹೊಸಕೋಟೆ ತಾಲೂಕಿನ ತಾವರಕೆರೆ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿ ಮನೋಜ್ಗೆ ಅಭಿನಂದಿಸಿದ ಸಚಿವರು, ಪ್ರಧಾನಿಯವರೊಂದಿಗೆ ಆತ್ಮವಿಶ್ವಾಸದಿಂದ ಮಾತನಾಡಬೇಕೆಂದು ಸಲಹೆ ನೀಡಿದರು.
ಎಲ್ಲ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಚಿವರು, ಪರೀಕ್ಷೆ, ಶಾಲೆ, ತರಗತಿ, ಪಠ್ಯ, ಆರೋಗ್ಯ ರಕ್ಷಣೆ, ಸಾಂಕ್ರಾಮಿಕ ರೋಗಗಳಿಂದ ದೂರ ಇರುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.
ರಾಜ್ಯದ ಇಬ್ಬರು ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರಧಾನಿ ಜೊತೆ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ ಭಾಗವಹಿಸಲು ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಉಡುಪಿ ವಿದ್ಯಾರ್ಥಿನಿಯ ತಂದೆ ಗಾರೆ ಕೆಲಸಗಾರರಾಗಿದ್ದರೆ, ಮನೋಜ್ ತಂದೆ ಹೂ ವ್ಯಾಪಾರಿಯಾಗಿದ್ದಾರೆ. ಈ ಇಬ್ಬರೂ ಬಡತನದ ಹಿನ್ನೆಲೆಯವರು, ಪ್ರತಿಭೆ ಎಲ್ಲಿದ್ದರೂ ಅರಳುತ್ತದೆ ಎಂಬುದಕ್ಕೆ ಈ ಮಕ್ಕಳೇ ಸಾಕ್ಷಿಯಾಗಿದ್ದಾರೆ. ನಮ್ಮ ರಾಜ್ಯಕ್ಕೆ ಅಭಿಮಾನ ಮೂಡುವಂತೆ ಮಾಡಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದರು.