ಬೆಂಗಳೂರು: ಜಿಲ್ಲೆಯಲ್ಲಿ ಹೆಚ್.ಐ.ವಿ ಸೋಂಕಿತರನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡುವುದರ ಜೊತೆಯಲ್ಲಿ ಅವರಿಗೆ ಸಾಮಾಜಿಕ ಸವಲತ್ತುಗಳನ್ನು ಒದಗಿಸಿ, ಅವರ ಜೀವನ ಮಟ್ಟ ಸುಧಾರಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಡೆದ ಹೆಚ್ಐವಿ ಸೋಂಕಿತ ಹಾಗೂ ಭಾದಿತರಿಗೆ ಸಾಮಾಜಿಕ ಸವಲತ್ತುಗಳನ್ನು ದೊರಕಿಸಿಕೊಡುವ ಕುರಿತ ಸಭೆಯಲ್ಲಿ ಮಾತನಾಡಿದ ರವೀಂದ್ರ, ತಾರತಮ್ಯ ಮತ್ತು ದೌರ್ಜನ್ಯಕ್ಕೊಳಗಾಗಿ ಮಾನಸಿಕವಾಗಿ ನೊಂದಿರುವ ಹೆಚ್‍ಐವಿ ಸೋಂಕಿತರಿಗೆ ಮನೋಸ್ಥೈರ್ಯ ತುಂಬಿ, ಆರೈಕೆ ಮತ್ತು ಬೆಂಬಲ ನೀಡುವ ಮೂಲಕ ಎಲ್ಲರಂತೆ ಜೀವನ ನಡೆಸಲು ಅನುವು ಮಾಡಿಕೊಡಬೇಕೆಂದರು. ಜೊತೆಗೆ, ಅವರ ಹಕ್ಕು ಮತ್ತು ಕರ್ತವ್ಯಗಳ ಕುರಿತು ಮಾಹಿತಿ ನೀಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಹೆಚ್.ಐ.ವಿ ಸೋಂಕಿತರಿಗೆ ಸೂಕ್ತ ಸವಲತ್ತುಗಳನ್ನು ಒದಗಿಸಲಾಗುವುದು : ಪಿ.ಎನ್ ರವೀಂದ್ರ ಹೆಚ್ಐವಿ ಸೋಂಕಿತರು, ದಮನಿತ ಮಹಿಳೆಯರು, ಲೈಂಗಿಕ ಅಲ್ಪಸಂಖ್ಯಾತರನ್ನು ಗುರುತಿಸಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಲಭ್ಯವಿರುವ ಸಾಮಾಜಿಕ ಸವಲತ್ತುಗಳಾದ ಅನ್ನ ಅಂತ್ಯೋದಯ ಯೋಜನೆಯಡಿ 35 ಕೆ.ಜಿ ಆಹಾರ ಧಾನ್ಯಗಳ ವಿತರಣೆ, ಕಾಬಾ ಯೋಜನೆ ವಿಶೇಷ ಪಾಲನಾ ಯೋಜನೆಯಡಿ 18 ವರ್ಷ ವಯಸ್ಸಿಗಿಂತ ಕಡಿಮೆ ಇರುವ ಮಕ್ಕಳಿಗೆ ತಿಂಗಳಿಗೆ 650 ರಿಂದ 750 ರೂವರೆಗೆ ನೇರವಾಗಿ ಇವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.
ಇನ್ನು ರಾಜೀವ್ ಗಾಂಧಿ ವಸತಿ ಯೋಜನೆಯಡಿ ವಸತಿಗಳನ್ನು ನಿರ್ಮಿಸಿ ಕೊಡಲಾಗುವುದು. ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಆಸ್ವತ್ರೆಗಳಲ್ಲಿ ಉಚಿತವಾಗಿ ರಕ್ತ ಪರೀಕ್ಷೆಗಳು ಮತ್ತು ಸೂಕ್ತ ಚಿಕಿತ್ಸೆಗಳನ್ನು ನೀಡಲಾಗುವುದು. ಕಡ್ಡಾಯ ಶಿಕ್ಷಣ ಹಕ್ಕು ಯೋಜನೆಯಡಿ ಖಾಸಗಿ ಶಾಲೆಗಳಲ್ಲಿ ಎಲ್ಕೆಜಿಗೆ ಉಚಿತವಾಗಿ ನೋಂದಣಿ ಮತ್ತು ಉನ್ನತ ಶಿಕ್ಷಣಕ್ಕೆ ಅಗತ್ಯವಿರುವ ವಿದ್ಯಾರ್ಥಿ ವೇತನ ಒದಗಿಸಲಾಗುವುದು. ಮಹಿಳಾ ಅಭಿವೃದ್ಧಿ ನಿಗಮದಿಂದ ಧನಶ್ರೀ ಯೋಜನೆಯಡಿ ಮಹಿಳೆಯರಿಗೆ 50 ಸಾವಿರ ರೂ. ಸಾಲದ ರೂಪದಲ್ಲಿ ಮತ್ತು 10 ಸಾವಿರ ಸಬ್ಸಿಡಿ ರೂಪದಲ್ಲಿ ನೀಡಲಾಗುವುದು ಎಂದರು. ಜೊತೆಗೆ ಜನಜಾಗೃತಿ ಮೂಡಿಸುವ ಕೆಲಸವೂ ಆಗುತ್ತದೆ ಎಂದು ಮಾಹಿತಿ ನೀಡಿದರು.