ದೊಡ್ಡಬಳ್ಳಾಪುರ: ರಾಜ್ಯದಲ್ಲೇ ಮೊದಲು ಎನ್ನಲಾದ ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಎರಡು ಗಂಟೆಗಳ ಕಾಲ ನಡೆದ ಚಿಕಿತ್ಸೆಯನ್ನು ದೊಡ್ಡಬಳ್ಳಾಪುರದ ಸರ್ಕಾರಿ ವೈದ್ಯರು ಯಶಸ್ವಿಯಾಗಿ ಮಾಡಿದ್ದಾರೆ.
ಕೋವಿಡ್ ಸೊಂಕಿನಿಂದ ಗುಣಮುಖರಾಗಿದ್ದ 56 ವರ್ಷದ ವ್ಯಕ್ತಿ ಬ್ಲ್ಯಾಕ್ ಫಂಗಸ್ಗೆ ತುತ್ತಾಗಿದ್ದರು. ಡಾ.ಸಂತೋಷ್ ನೇತೃತ್ವದ ವೈದ್ಯರ ತಂಡ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ ನಡೆಸಿದ್ದಾರೆ. ವೈದ್ಯರ ತಂಡದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಪರಮೇಶ್ವರ್ ನಾಯಕ್, ಡಾ.ರಮೇಶ್, ಡಾ.ಅರುಣ್, ಡಾ.ರಾಜು, ಡಾ.ಪ್ರೇಮಲತಾ ಪಾಲ್ಗೊಂಡಿದ್ದರು.
ಬ್ಲ್ಯಾಕ್ ಫಂಗಸ್ಗೆ ಯಶಸ್ವಿ ಚಿಕಿತ್ಸೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ಗೆ ತುತ್ತಾದವರನ್ನ ಚಿಕಿತ್ಸೆಗಾಗಿ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ಕಳುಹಿಸಲಾಗುತ್ತಿತ್ತು. ಆದರೆ, ಇದೀಗ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಇಲ್ಲಿಯೇ ಚಿಕಿತ್ಸೆ ನಡೆಸಲು ತೀರ್ಮಾನ ಮಾಡಿದರು. ಬ್ಲ್ಯಾಕ್ ಫಂಗಸ್ ಚಿಕಿತ್ಸೆಯ ಪ್ರಸ್ತಾಪವನ್ನ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಗಮನಕ್ಕೆ ತಂದರು.
ವೈದ್ಯರ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದ ಜಿಲ್ಲಾಧಿಕಾರಿಗಳು ಚಿಕಿತ್ಸೆಗೆ ಬೇಕಾದ ಸಲಕರಣೆ ಯಂತ್ರಗಳ ಖರೀದಿಗೂ ಸಮ್ಮತಿ ನೀಡಿದರು. ವೈದ್ಯರ ತಂಡ ಬೋರಿಂಗ್ ಆಸ್ಪತ್ರೆಗೆ ಭೇಟಿ ನೀದಿ ಬ್ಲ್ಯಾಕ್ ಫಂಗಸ್ಗೆ ಚಿಕಿತ್ಸೆಯ ಬಗ್ಗೆ ತರಬೇತಿಯನ್ನು ಪಡೆದರು.
ಈ ಬಳಿಕ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿನ್ನೆ ಮಧ್ಯಾಹ್ನ 12:30ರ ಸುಮಾರಿಗೆ ಬ್ಲ್ಯಾಕ್ ಫಂಗಸ್ಗೆ ತುತ್ತಾಗಿದ್ದ ವ್ಯಕ್ತಿಗೆ ಚಿಕಿತ್ಸೆ ಪ್ರಾರಂಭಿಸಿದರು. 2 ಗಂಟೆಗೆ ಸುಮಾರಿಗೆ ಚಿಕಿತ್ಸೆ ಯಶಸ್ವಿಗೊಳಿದ್ದಾರೆ. ಇನ್ನು ವೈದ್ಯರ ಶ್ರಮಕ್ಕೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.