ಸಬ್ ಇನ್ಸ್ಪೆಕ್ಟರ್ ಪತ್ನಿ ಅನುಮಾನಾಸ್ಪದ ಸಾವು ಆನೇಕಲ್: ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಪಟೇಲ್ ಲೇಔಟ್ನಲ್ಲಿ ಸಬ್ ಇನ್ಸ್ಪೆಕ್ಟರ್ ಪತ್ನಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಮೃತ ಮಹಿಳೆಯನ್ನು ಸಬ್ ಇನ್ಸ್ಪೆಕ್ಟರ್ ರಮೇಶ್ ಅವರ ಪತ್ನಿ ಶಿಲ್ಪಾ(33) ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಕಾಲೇಜು ಸಮಯದಲ್ಲಿ ಮೃತ ಮಹಿಳೆ ಮತ್ತು ರಮೇಶ್ ಅವರು ಪ್ರೀತಿಸಿದ್ದರು. ಬಳಿಕ ರಮೇಶ್ ಅವರು ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾದ ಮೇಲೆ ವಿವಾಹವಾಗಿದ್ದರು. ಮದುವೆಯಾದ ಬಳಿಕ ಪತ್ನಿಯ ಜಾತಿ ವಿಚಾರಕ್ಕೆ ಕಿತ್ತಾಟ ನಡೆಯುತ್ತಿತ್ತು ಎನ್ನಲಾಗಿದೆ. ಈ ಹಿನ್ನೆಲೆ ಸಬ್ ಇನ್ಸ್ಪೆಕ್ಟರ್ ರಮೇಶ್ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಿದ್ದರು. ಬಳಿಕ ರಾಜಿ ಪಂಚಾಯಿತಿ ಮಾಡಲಾಗಿತ್ತು ಎನ್ನಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಕೊಲೆ ಆರೋಪ:ಸಬ್ ಇನ್ಸ್ಪೆಕ್ಟರ್ ರಮೇಶ್ ತನ್ನ ಪತ್ನಿ ಶಿಲ್ಪಾ(33) ಕೊಲೆಗೈದು ಪರಾರಿಯಾಗಿದ್ದಾನೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. ''ಕಳೆದ ಹತ್ತು ವರ್ಷಗಳಿಂದ ರಮೇಶ್ ಹಾಗೂ ಶಿಲ್ಪಾ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಐದಾರು ವರ್ಷಗಳಿಂದ ಲಿವಿಂಗ್ ಟುಗೇದರ್ ರಿಲೇಶನ್ಶಿಪ್ನಲ್ಲಿದ್ದರು. ಆದರೆ ಶಿಲ್ಪಾ ಜೊತೆ ಮದುವೆಯಾಗಲು ರಮೇಶ್ ಇಲ್ಲಸಲ್ಲದ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಆದರೂ ಹಠಬಿಡದೆ ಪೊಲೀಸರ ಸಮ್ಮುಖದಲ್ಲಿ ಶಿಲ್ಪಾ ಒಪ್ಪಿಸಿದ್ದಳು. ಪೊಲೀಸರ ಒತ್ತಾಯಕ್ಕೆ ಮಣಿದು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದ'' ಎಂದು ಶಿಲ್ಪಾಳ ಚಿಕ್ಕಪ್ಪ ಪೋತಲಪ್ಪ ಆವರು ಆರೋಪಿಸಿದ್ದಾರೆ.
''ಆದರೆ ಮದುವೆ ಬಳಿಕವೂ ಮನೆಯವರು ಒಪ್ಪುತ್ತಿಲ್ಲ ಎಂದು ಶಿಲ್ಪಾಗೆ ಪ್ರತ್ಯೇಕ ಮನೆ ವ್ಯವಸ್ಥೆ ಮಾಡಿದ್ದ. ಆದರೆ ಜೀವನಕ್ಕೆ ಯಾವುದೇ ಅರ್ಥಿಕ ನೆರವು ನೀಡುತ್ತಿರಲಿಲ್ಲ. ಮದುವೆ ಬಳಿಕ ಪದೇ ಪದೇ ಜಾತಿ ನಿಂದನೆ ಮಾಡುತ್ತಿದ್ದ. ಜೊತೆಗೆ ತನ್ನ ಅಕ್ಕನ ಮಗಳನ್ನು ಮದುವೆಯಾಗಲು ನೀನು ಅಡ್ಡಿಯಾಗಿರುವೆ. ಸೆಟಲ್ಮೆಂಟ್ ಮಾಡಿಕೊಂಡು ಮನೆ ಬಿಟ್ಟು ಹೋಗು ಎಂದು ಕಿರುಕುಳ ನೀಡಿದ್ದಾನೆ'' ಎಂದು ಪೋತಲಪ್ಪ ಆರೋಪ ಮಾಡಿದ್ದಾರೆ.
''ಆದರೂ ಗಂಡ ಬೇಕು ಎಂದು ಕಿರುಕುಳ ಸಹಿಸಿಕೊಂಡಿದ್ದ ಶಿಲ್ಪಾ, ನಿನ್ನೆ ರಾತ್ರಿ ಕುಟುಂಬದವರ ಜೊತೆ ಪೋನಿನಲ್ಲಿ ಮಾತನಾಡಿದ್ದಳು. ಸ್ವಂತ ಖರ್ಚಿಗೆ ಮನೆಯವರಿಂದ ಹಣವನ್ನೂ ಸಹ ಹಾಕಿಸಿಕೊಂಡಿದ್ದಳು. ಆದರೆ ಇಂದು ಬೆಳಗ್ಗೆ ಶಿಲ್ಪಾ ಮನೆಯ ಬಾಗಿಲು ತೆರೆಯುತ್ತಿಲ್ಲ ಎಂದು ಮಾಹಿತಿ ಮನೆಯ ಮಾಲೀಕರಿಂದ ತಿಳಿಯಿತು. ನಾವು ಬರುವಷ್ಟರಲ್ಲಿ ಮಗಳು ಆಸ್ಪತ್ರೆ ಶವಾಗಾರದಲ್ಲಿ ಶವವಾಗಿದ್ದಾಳೆ. ನಮ್ಮ ಮಗಳು ಸಾಯುವ ಮನಸ್ಥಿತಿಯವಳಲ್ಲ. ಪತಿ ರಮೇಶ್ ಕೊಲೆ ಮಾಡಿರುವ ಅನುಮಾನವಿದೆ. ಕಾನೂನು ರೀತಿಯ ತನಿಖೆ ನಡೆಸಿ ನ್ಯಾಯ ಕೊಡಿಸಬೇಕು'' ಎಂದು ಶಿಲ್ಪಾ ಚಿಕ್ಕಪ್ಪ ಪೋತಲಪ್ಪ ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಆಗ್ನೇಯ ವಿಭಾಗದ ಡಿಸಿಪಿ ಸಿ ಕೆ ಬಾಬಾ, ''ಘಟನೆಯು ಬೆಳಗ್ಗೆ ಆಗಿದ್ದು, ನಾವು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಸದ್ಯ ಮೃತದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತಳ ಸಂಬಂಧಿಕರೆಲ್ಲ ಬಂದಿದ್ದು, ಎಫ್ಐಆರ್ ದಾಖಲಿಸಲಾಗುವುದು. ಎಫ್ಐಆರ್ ಪ್ರಕಾರ ಮುಂದಿನ ತನಿಖೆ ನಡೆಯಲಿದೆ. ಪೋಷಕರ ಆರೋಪ ಏನೆ ಇದ್ದರೂ, ಅವರು ನೀಡುವ ದೂರಿನ ಆಧಾರದ ಮೇಲೆ ತನಿಖೆ ನಡೆಯಲಿದೆ'' ಎಂದು ತಿಳಿಸಿದರು.
ಇದನ್ನೂ ಓದಿ:ಕೌಟುಂಬಿಕ ಕಲಹ: ಪತ್ನಿ ಕೊಂದು ಪೊಲೀಸರಿಗೆ ಶರಣಾದ ಪತಿ