ದೊಡ್ಡಬಳ್ಳಾಪುರ: ಶಾಲೆಯಲ್ಲಿ ಸಮರ್ಪಕ ನೀರಿನ ಸರಬರಾಜು ಆಗದ ಹಿನ್ನೆಲೆ ವಿದ್ಯಾರ್ಥಿಗಳು ಕೈಯಲ್ಲಿ ಲೋಟ ತಟ್ಟೆ ಹಿಡಿದು ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ದೊಡ್ಡಬಳ್ಳಾಪುರ ತಾಲೂಕಿನ ಮೆಳೇಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ನೀರಿನ ಸಮಸ್ಯೆಯುಂಟಾಗಿದೆ. ಶಾಲೆಯ ಅವರಣದಲ್ಲಿದ್ದ ಬೋರ್ವೆಲ್ಗೆ ಕಲ್ಲು ಹಾಕಿದ ಕಿಡಿಗೇಡಿಗಳು ಬೋರ್ವೆಲ್ ಹಾಳು ಮಾಡಿದ್ದಾರೆ. ಇದರಿಂದ ಪಂಚಾಯತ್ ವತಿಯಿಂದ ಬಿಡುವ ನೀರನ್ನ ಶಾಲೆ ಅವಲಂಬಿಸಿತ್ತು. ಪಂಚಾಯಿತಿ ಬಿಡುವ ನೀರಿನಲ್ಲಿ ಶೌಚಾಲಯ, ಬಿಸಿಯೂಟ ಸೇರಿದಂತೆ ನಿತ್ಯ ಬಳಕೆ ಮಾಡಲಾಗುತ್ತಿತ್ತು.
ಆದರೆ, ಇತ್ತೀಚೆಗೆ ಸಮರ್ಪಕವಾಗಿ ಪಂಚಾಯತ್ ನೀರು ಬಿಡದಿದ್ದರಿಂದ ವಿದ್ಯಾರ್ಥಿಗಳು ನೀರಿಲ್ಲದೇ ಕಷ್ಟಪಡುತ್ತಿದ್ದರು. ಮೆಳೇಕೋಟೆ ಗ್ರಾಮ ಪಂಚಾಯಿತಿಗೆ ದೂರು ನೀಡಿದರೂ ಯಾವುದೇ ಪ್ರಯೋಜವಾಗಿರಲಿಲ್ಲ. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಇಂದು ಪಂಚಾಯತ್ ಕಚೇರಿ ಮುಂದೆ ಲೋಟ ತಟ್ಟೆ ಹಿಡಿದು ಪ್ರತಿಭಟನೆ ನಡೆಸಿದರು.