ದೇವನಹಳ್ಳಿ:ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ಸಂದರ್ಭದಲ್ಲಿ ಸಾವನ್ನಪ್ಪಿದ್ದ ಕನ್ನಡಿಗ ವಿದ್ಯಾರ್ತೀ ನವೀನ್ ಪಾರ್ಥಿವ ಶರೀರ 21 ದಿನಗಳ ನಂತರ ತಾಯ್ನಾಡಿಗೆ ತಲುಪಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ವಿಭಾಗದಲ್ಲಿ ಪಾರ್ಥಿವ ಶರೀರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿದ್ಯಾರ್ಥಿಯ ಕುಟುಂಬಕ್ಕೆ ಹಸ್ತಾಂತರಿಸಿದರು.
ದುಬೈ ಮೂಲಕ ಸೋಮವಾರ ಮುಂಜಾನೆ 3 ಗಂಟೆ ವೇಳೆ ನವೀನ್ ಪಾರ್ಥಿವ ಶರೀರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ್ ಉದಾಸಿ, ಸಚಿವ ಡಾ.ಕೆ.ಸುಧಾಕರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಇತರರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಮೃತ ನವೀನ್ ಸಹೋದರ ಹರ್ಷ ಸೇರಿದಂತೆ ಗ್ರಾಮಸ್ಥರು ಪಾರ್ಥಿವ ಶರೀರವನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಪಡೆದುಕೊಂಡು ಆಂಬ್ಯುಲೆನ್ಸ್ನಲ್ಲಿ ಹಾವೇರಿ ಜಿಲ್ಲೆಯ ಸ್ವಗ್ರಾಮಕ್ಕೆ ತೆರಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನವೀನ್ ತಂದೆ, ತಾಯಿ ಆತ ಮೆಡಿಕಲ್ ಮುಗಿಸಿ ಬಂದ ನಂತರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಮ್ಮ ಮಗನನ್ನು ಸ್ವಾಗತಿಸಬೇಕಿತ್ತು. ಆದರೆ, ಇಂದು ಆತನ ಪಾರ್ಥಿವ ಶರೀರ ಬೆಂಗಳೂರಿಗೆ ಬಂದಿರುವುದು ಬಹಳ ನೋವಿನ ಸಂಗತಿ. ಯೋಚನೆ ಮಾಡುವುದಕ್ಕೂ ಕಷ್ಟವಾಗುತ್ತದೆ ಎಂದರು.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದೆ. ನಮ್ಮ ದೇಶದ ಹಲವಾರು ವಿದ್ಯಾರ್ಥಿಗಳು ಮೆಡಿಕಲ್ ಓದುತ್ತಿರುವುದು ಗೊತ್ತಿರುವ ವಿಷಯ. ಅನೇಕ ಮಂದಿ ಸುರಕ್ಷಿತವಾಗಿ ವಾಪಸ್ ಬಂದಿದ್ದಾರೆ. ದುರ್ದೈವವೆಂದರೆ ನವೀನ್ ಮಿಸೈಲ್ ದಾಳಿಯಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಯಾದ ಕ್ಷಣದಿಂದ ನವೀನ್ ಕುಟುಂಬದೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಅಂದೇ ನಮ್ಮ ಪ್ರಧಾನಿಯವರು ಕುಟುಂಬದವರನ್ನು ಸಂಪರ್ಕಿಸಿ ಸಾಂತ್ವನ ಹೇಳಿದ್ದರು ಎಂದು ತಿಳಿಸಿದರು.