ಹೊಸಕೋಟೆ: ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಜೀವದ ಹಂಗು ತೊರೆದು ಪೊಲೀಸ್ ಸಿಬ್ಬಂದಿ ಶ್ರಮಿಸುತ್ತಿರುವುದು ಶ್ಲಾಘನೀಯ. ಅವರ ಆರೋಗ್ಯ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಬೆಂಗಳೂರು ಗ್ರಾಮಾಂತರ ಎಸ್.ಪಿ. ರವಿ.ಡಿ ಚನ್ನಣ್ಣನವರ್ ಹೇಳಿದರು.
ಹೊಸಕೋಟೆಯ ಪೊಲೀಸ್ ಠಾಣೆಯ ಸಂಪೂರ್ಣ ಪ್ರದೇಶ ಹಾಗೂ ನಗರದಲ್ಲಿ ಸೀಲ್‌ಡೌನ್ ಪ್ರದೇಶಗಳಿಗೆ ಡ್ರೋನ್ ಮೂಲಕ ಕ್ರಿಮಿನಾಶಕ ಸಿಂಪಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಡ್ರೋನ್ ಮೂಲಕ ಕ್ರಿಮಿನಾಶಕ ಸಿಂಪಡಿಸುವ ಕಾರ್ಯಕ್ಕೆ ಚಾಲನೆ ಖಾಸಗಿ ಎನ್‌ಜಿಒ ಸಹಯೋಗದೊಂದಿಗೆ ಗ್ರಾಮಾಂತರ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಿಗೆ ಹಾಗೂ ಸಿಬ್ಬಂದಿ ಉಪಯೋಗಿಸುವ ವಾಹನಗಳಿಗೆ ಡ್ರೋನ್ ಮೂಲಕ ಕ್ರಿಮಿನಾಶಕ ಸಿಂಪಡಿಸಲಾಗುತ್ತಿದೆ ಎಂದರು.
ದೇಶದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಸುಗರ್ಧನ ಸಂಸ್ಥೆ ಹಾಗೂ ಟೀಮ್ ದಕ್ಷ ತಂಡದಿಂದ ಸಂಪೂರ್ಣ ದೇಶಿ ನಿರ್ಮಿತ ಆರ್ಗ್ಯಾನಿಕ್ ಯುಕ್ತ ಕ್ರಿಮಿನಾಶಕ ಸಿಂಪಡಿಸಲಾಗುತ್ತಿದೆ ಎಂದು ಹೇಳಿದರು.