ನೆಲಮಂಗಲ (ಬೆಂ.ಗ್ರಾ):ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಮಾದವಾರದ ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ(BIEC) ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಮಾಡಲಾಗಿದ್ದು, ಇದೀಗ ಇದು ಸಮಸ್ಯೆಗಳ ಆಗರವಾಗಿದೆ ಎಂಬ ಆರೋಪ ಕೇಳಿಬಂದಿದೆ.
ರಾಜ್ಯದ ಅತೀ ದೊಡ್ಡ ಕೋವಿಡ್ ಕೇರ್ ಸೆಂಟರ್ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ ಕೇಂದ್ರದಲ್ಲಿ ಅವ್ಯವಸ್ಥೆಯ ದೂರು ಕೇಳಿಬಂದಿದೆ. ಕೋವಿಡ್ ಕೇರ್ ಸೆಂಟರ್ನಲ್ಲಿ ಸಮಸ್ಯೆಗಳ ಸರಮಾಲೆಯೇ ಎದ್ದು ಕಾಣುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿನ ರೋಗ ಲಕ್ಷಣಗಳಿಲ್ಲದ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಕೋವಿಡ್ ಕೇರ್ ಸೆಂಟರ್ನಲ್ಲಿ ಸಾವಿರಕ್ಕೂ ಹೆಚ್ಚು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದರೆ ಸೂಕ್ತ ನಿರ್ವಹಣೆಯಿಲ್ಲದೆ ಸೋಂಕಿತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಶುದ್ಧೀಕರಿಸಿದ ಬಿಸಿ ನೀರು ನೀಡುವ ಬದಲು ಟ್ಯಾಂಕರ್ ನೀರು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಇದೇ ನೀರನ್ನು ಸ್ನಾನಕ್ಕೂ, ಶೌಚಾಲಯ ಬಳಕೆಗೂ ನೀಡುತ್ತಿದ್ದಾರೆ. ಇನ್ನೂ ಊಟದ ವಿಚಾರದಲ್ಲಿಯೂ ರುಚಿಕರ ಉಟ ದೊರೆಯುತ್ತಿಲ್ಲ ಎಂಬುದು ಸೋಂಕಿತರ ಆರೋಪ.
ಅಲ್ಲದೆ ವಿವಾಹ ಸಮಾರಂಭದಲ್ಲಿ ನೀಡುವಂತೆ ಸಾಮೂಹಿಕ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಸದ್ಯ ಸಾವಿರಕ್ಕೂ ಹೆಚ್ಚು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ ಶೇ.80ರಷ್ಟು ಸೋಂಕಿತರಲ್ಲಿ ಯಾವುದೇ ರೋಗಲಕ್ಷಣಗಳಿಲ್ಲ. ಇನ್ನುಳಿದ ಶೇ. 20ರಷ್ಟು ಸೋಂಕಿತರು ಜ್ವರ, ಕೆಮ್ಮಿನಿಂದ ಬಳಲುತ್ತಿದ್ದಾರೆ.