ದೊಡ್ಡಬಳ್ಳಾಪುರ: ಮಸೀದಿ, ಮದರಸಾಗಳಿಗೆ ನೀಡುತ್ತಿದ್ದ ತಸ್ತಿಕ್ ಭತ್ಯೆ ನಿಲ್ಲಿಸುವಂತೆ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಆದೇಶಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಮೀರ್ ಅಹಮ್ಮದ್, ಬಿಜೆಪಿ ಸರ್ಕಾರದಲ್ಲಿ ಅಲ್ಪಸಂಖ್ಯಾತರಿಗೆ ನ್ಯಾಯ ಸಿಗುವ ನಿರೀಕ್ಷೆ ಇಲ್ಲವೆಂದರು.
ನಿಖಿಲ್ ಕುಮಾರಸ್ವಾಮಿ ನನ್ನ ಮಗನಿದ್ದಂತೆ : ನಗರದಲ್ಲಿ ಶಾಸಕ ಟಿ. ವೆಂಕಟರಮಣಯ್ಯ ಹಮ್ಮಿಕೊಂಡಿದ್ದ ಅನ್ನದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸದಾಶಿವನಗರದ ಗೆಸ್ಟ ಹೌಸ್ ದಾಂಧಲೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು 9 ವರ್ಷದ ಹುಡುಗನಾಗಿದ್ದಾಗಿಂದ ನಿಖಿಲ್ನನ್ನು ನೋಡುತ್ತಿದ್ದೇನೆ, ನನ್ನ ಮಗ ಸಹೀದ್ ಮತ್ತು ನಿಖಿಲ್ ಒಂದೇ ವಯಸ್ಸಿನವರು. ಸಹೀದ್ನಂತೆ ನಿಖಿಲ್ ನನ್ನ ಮಗನಿದ್ದಂತೆ. ನನ್ನ ಮಗನ ಬಗ್ಗೆ ಮಾತನಾಡುವುದಕ್ಕೆ ಇಷ್ಟ ಪಡೋಲ್ಲ ಎಂದರು.
ಬಿಜೆಪಿ ಸರ್ಕಾರದಲ್ಲಿ ಅಲ್ಪ ಸಂಖ್ಯಾತರಿಗೆ ನ್ಯಾಯ ಸಿಗುವ ಭರವಸೆಯಿಲ್ಲ :ಹಜ್ ಮತ್ತು ವಕ್ಫ್ ಸಚಿವರಾದ ಆನಂದ್ ಸಿಂಗ್ ಅಥವಾ ಮುಖ್ಯಮಂತ್ರಿಯವರು ಆದೇಶ ನೀಡ ಬೇಕು. ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತಸ್ತಿಕ್ ಭತ್ಯೆ ರದ್ದು ಮಾಡುವ ಅಧಿಕಾರವಿಲ್ಲ. ಹಜ್ ಮತ್ತು ವಕ್ಫ್ ಮಂಡಳಿಗೂ ಮುಜರಾಯಿ ಇಲಾಖೆ ಸಚಿವರಿಗೂ ಏನು ಸಂಬಂಧ ಎಂದರು.
ಬಿಜೆಪಿ ಸರ್ಕಾರದಲ್ಲಿ ಅಲ್ಪ ಸಂಖ್ಯಾತರಿಗೆ ನ್ಯಾಯ ಸಿಗುತ್ತೆ ಅಂತ ನಿರೀಕ್ಷೆ ಇಟ್ಟುಕೊಂಡಿಲ್ಲ, ಯಡಿಯೂರಪ್ಪ ಒಬ್ಬ ಸೆಕ್ಯುಲರ್ ಲೀಡರ್. ರೈಟ್ ಪರ್ಸನ್ ರಾಂಗ್ ಪಾರ್ಟಿಯಲ್ಲಿದ್ದಾರೆ. ಅವರು ಒಂದು ವೇಳೆ ತಸ್ತಿಕ್ ರದ್ದು ಮಾಡಿದ್ದರೆ ನಾವೇನು ಮಾಡಲಾಗುವುದಿಲ್ಲವೆಂದರು.
ಯಡಿಯೂರಪ್ಪ ಇನ್ನೆರಡು ವರ್ಷ ಮುಖ್ಯಮಂತ್ರಿಯಾಗಿರುವುದಾಗಿ ಹೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅದು ಬಿಜೆಪಿ ಪಕ್ಷಕ್ಕೆ ಸಂಬಂಧಿಸಿದ ವಿಚಾರ, ಅದಕ್ಕೂ ನಮಗೂ ಸಂಬಂಧವಿಲ್ಲ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರೇ ಇನ್ನೆರಡು ವರ್ಷ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಹೇಳಿದ್ದಾರೆ ಅಲ್ಲಾ ಎಂದರು.